ವಾಷಿಂಗ್ಟನ್: ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಹಮಾಸ್ ಬಂಡುಕೋರರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್‌ಗೆ ರಕ್ಷಣಾ ನೆರವು ರವಾನಿಸಿದ್ದಾರೆ.
ಯುದ್ಧ ವಿಮಾನಗಳನ್ನು ಹೊತ್ತೊಯ್ಯುವ ಅಮೆರಿಕದ ನೌಕಪಡೆಯ ಯುಎಸ್‌ಎಸ್ ಗೆರಾಲ್ಡ್ ಆರ್ ಫೋರ್ಡ್ ನೌಕೆ, ಕ್ಷಿಪಣಿಗಳು ಹಾಗೂ ಇತರ ಯುದ್ಧ ನೌಕೆಗಳನ್ನು ಕಳುಹಿಸುತ್ತಿರುವುದಾಗಿ ಪೆಂಟಗನ್‌ನ (ಅಮೆರಿಕ ಸೇನೆಯ ಮುಖ್ಯ ಕಚೇರಿ) ಹೇಳಿಕೆ ತಿಳಿಸಿದೆ.
ಯುದ್ದವಿಮಾನಗಳು ಭಾನುವಾರ ಮಧ್ಯಾಹ್ನವೇ ಇಸ್ರೇಲ್‌ನತ್ತ ಹೊರಟಿವೆ. ಹಿಂಸಾಚಾರದಲ್ಲಿ ನಾಲ್ವರು ಅಮೆರಿಕದ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ದೂರವಾಣಿ ಮೂಲಕ ಚರ್ಚಿಸಿದ್ದಾರೆ. ಇಸ್ರೇಲ್‌ಗೆ ಹೆಚ್ಚುವರಿ ನೆರವು ನೀಡಲು ರಕ್ಷಣಾ ಪಡೆಗಳನ್ನು ಕಳುಹಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ನೆರವು ನೀಡಲಾಗುವುದು ಎಂದು ತಿಳಿಸಲಾಯಿತು ಎಂದು ಶ್ವೇತಭವನ ಹೇಳಿದೆ.
‘ಇಸ್ರೇಲ್‌ನ ಯಾವುದೇ ಶತ್ರು ಪ್ರಸ್ತುತ ಪರಿಸ್ಥಿತಿಯ ಲಾಭ ಪಡೆಯಬಹುದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆಯೂ ನಾಯಕರು ಚರ್ಚಿಸಿದ್ದಾರೆ’ ಎಂದು ಹೇಳಿಕೆ ತಿಳಿಸಿದೆ.
‘ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಪ್ರಮುಖ ದೇಶ ಅಮೆರಿಕ, ರಕ್ಷಣಾ ನೆರವು ಒದಗಿಸುವ ಮೂಲಕ ನಮ್ಮ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದೆ’ ಎಂದು ಹಮಾಸ್ ಆರೋಪಿಸಿದೆ.
ಯುದ್ಧಪೀಡಿತ ಪ್ರದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸಿರುವ ಕಾರಣ ಬೈಡನ್ ಅವರ ಜತೆ ಚರ್ಚಿಸಿ ವೈರಿಗಳನ್ನು ಹತ್ತಿಕ್ಕಲು ರಕ್ಷಣಾ ಪಡೆಗಳನ್ನು ಕಳುಹಿಸಲಾಗಿದೆ. ಯುದ್ದವಿಮಾನಗಳ ಜತೆಗೆ ಕ್ಷಿಪಣಿ ಕ್ರೂಸರ್, ನಾಲ್ಕು ಕ್ಷಿಪಣಿ ನಾಶಕಗಳು ಸಹ ಇವೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಮೆರಿಕ ಸರ್ಕಾರ ಇಸ್ರೇಲ್ ರಕ್ಷಣಾ ಪಡೆಗಳಿಗೆ ಶಸ್ತ್ರಾಸ್ತ್ರಗಳು ಸೇರಿದಂತೆ ಹೆಚ್ಚುವರಿ ಸೇನಾ ಪರಿಕರಗಳು ಮತ್ತು ಸಂಪನ್ಮೂಲಗಳನ್ನು ತ್ವರಿತವಾಗಿ ಒದಗಿಸಲಿದೆ. ಸೇನಾ ನೆರವಿನಿಂದ ಇಸ್ರೇಲ್ ಜನರಿಗೆ ಉಕ್ಕಿನ ಬಲ ಬಂದಂತಾಗುತ್ತದೆ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ‘ಹಮಾಸ್ ಬಂಡುಕೋರರು ಅಮೆರಿಕದ ಪ್ರಜೆಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿರಬಹುದು. ಇದು ಬೃಹತ್ ಭಯೋತ್ಪಾದಕ ದಾಳಿಯಾಗಿದೆ. ಮನೆಗಳಿಗೆ ನುಗ್ಗಿ ನಾಗರಿಕರನ್ನು ಗುಂಡಿಕ್ಕಿ ಕೊಲ್ಲಲಾಗುತ್ತಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.