ADVERTISEMENT

ಇರಾನ್‌ ದಾಳಿಯನ್ನು ಮೆಟ್ಟಿನಿಂತ ಇಸ್ರೇಲ್ ರಕ್ಷಣಾ ವ್ಯವಸ್ಥೆ

ಏಜೆನ್ಸೀಸ್
Published 14 ಏಪ್ರಿಲ್ 2024, 23:30 IST
Last Updated 14 ಏಪ್ರಿಲ್ 2024, 23:30 IST
<div class="paragraphs"><p>ಡ್ರೋನ್ ದಾಳಿ</p></div>

ಡ್ರೋನ್ ದಾಳಿ

   

ರಾಯಿಟರ್ಸ್‌

ಜೆರುಸಲೇಂ: ಹಮಾಸ್‌ ಬಂಡುಕೋರರ ವಿರುದ್ಧ ಆರು ತಿಂಗಳಿನಿಂದ ನಡೆಯುತ್ತಿರುವ ಸಮರದಲ್ಲಿ ಅವಿಶ್ರಾಂತವಾಗಿ ಕೆಲಸ ಮಾಡುತ್ತಿರುವ ಇಸ್ರೇಲ್‌ನ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಭಾನುವಾರ ಹೊಸದೊಂದು ಸವಾಲು ಎದುರಾಗಿತ್ತು.

ADVERTISEMENT

ಇರಾನ್‌ ಕಡೆಯಿಂದ ನುಗ್ಗಿಬಂದ 300ಕ್ಕೂ ಹೆಚ್ಚಿನ ಡ್ರೋನ್‌ಗಳು ಮತ್ತು ಗುರಿನಿರ್ದೇಶಿತ ಕ್ಷಿಪಣಿಗಳನ್ನು ಇಸ್ರೇಲ್‌ನ ಈ ರಕ್ಷಣಾ ವ್ಯವಸ್ಥೆಯು ಆಗಸದಲ್ಲೇ ಹೊಡೆದುರುಳಿಸಬೇಕಿತ್ತು.

ಅಮೆರಿಕ ಮತ್ತು ಬ್ರಿಟನ್ನಿನ ನೆರವು ಪಡೆದು ಕಾರ್ಯಾಚರಣೆ ನಡೆಸಿದ ಇಸ್ರೇಲ್‌ನ ರಕ್ಷಣಾ ವ್ಯವಸ್ಥೆಯು, ದೇಶದಲ್ಲಿ ಗಂಭೀರ ಪ್ರಮಾಣದ ಆಸ್ತಿ ಅಥವಾ ಜೀವಹಾನಿ ಆಗುವುದನ್ನು ತಡೆಯಿತು. ಇಸ್ರೇಲ್‌ ಕಟ್ಟಿರುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಮೇಲೆ ಒಂದು ನೋಟ ಇಲ್ಲಿದೆ.

ದಿ ಆ್ಯರೊ: ಅಮೆರಿಕದ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯು ದೂರವ್ಯಾಪ್ತಿಯ ಕ್ಷಿಪಣಿಗಳನ್ನು ಹೊಡೆದುರುಳಿಸುತ್ತದೆ. ಗುರಿನಿರ್ದೇಶಿತ ಕ್ಷಿಪಣಿಗಳನ್ನೂ ಇದು ಗುರುತಿಸಿ ಆಗಸದಲ್ಲೇ ಧ್ವಂಸಗೊಳಿಸುತ್ತದೆ. ವಾಯುಮಂಡಲದ ಆಚೆಗೆ ಕೆಲಸ ಮಾಡುವ ಈ ವ್ಯವಸ್ಥೆಯನ್ನು ಯೆಮನ್‌ನ ಹೌಥಿ ಬಂಡುಕೋರರು ಉಡಾಯಿಸುತ್ತಿರುವ ದೂರವ್ಯಾಪ್ತಿಯ ಕ್ಷಿಪಣಿಗಳನ್ನು ಹೊಡೆದುರುಳಿಸಲು ಕೂಡ ಬಳಸಲಾಗುತ್ತಿದೆ.

ಡೇವಿಡ್ಸ್‌ ಸ್ಲಿಂಗ್: ಈ ವ್ಯವಸ್ಥೆಯನ್ನು ಕೂಡ ಅಮೆರಿಕದ ಸಹಯೋಗದಲ್ಲಿ ರೂಪಿಸಲಾಗಿದೆ. ಇದನ್ನು ಹಿಜ್ಬುಲ್ಲಾ ಬಂಡುಕೋರರು ಬಳಸುವ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳನ್ನು ಧ್ವಂಸಗೊಳಿಸಲು ಬಳಸಲಾಗುತ್ತದೆ.

ಪೇಟ್ರಿಯಟ್: ಅಮೆರಿಕ ನಿರ್ಮಿತ ‘ಪೇಟ್ರಿಯಟ್’, ಇಸ್ರೇಲ್‌ನ ಬತ್ತಳಿಕೆಯಲ್ಲಿ ಇರುವ ಅತ್ಯಂತ ಹಳೆಯ ಕ್ಷಿಪಣಿ ನಿರೋಧಕ ವ್ಯವಸ್ಥೆ. ಇದನ್ನು 1991ರ ಮೊದಲ ಕೊಲ್ಲಿ ಯುದ್ಧದ ಸಮಯದಲ್ಲಿ ಇರಾಕ್‌ ಕಡೆಯಿಂದ ನುಗ್ಗಿ ಬರುತ್ತಿದ್ದ ಸ್ಕುಡ್ ಕ್ಷಿಪಣಿಗಳನ್ನು ಹೊಡೆದುರುಳಿಸಲು ಬಳಸಲಾಗಿತ್ತು. ಈಗ ಇದನ್ನು ಡ್ರೋನ್‌ ಹೊಡೆದುರುಳಿಸಲು ಬಳಸಲಾಗುತ್ತಿದೆ.

ಐರನ್ ಡೋಮ್: ಇದು ಅಮೆರಿಕದ ಸಹಾಯದೊಂದಿಗೆ ಇಸ್ರೇಲ್ ಅಭಿವೃದ್ಧಿಪಡಿಸಿರುವ ವ್ಯವಸ್ಥೆ. ಇದು ಕಿರು ವ್ಯಾಪ್ತಿಯ ರಾಕೆಟ್‌ಗಳನ್ನು ಹೊಡೆದುರುಳಿಸುವ ಕೆಲಸವನ್ನು ಬಹಳ ಕ್ಷಮತೆಯಿಂದ ಮಾಡುತ್ತದೆ. ಕಳೆದ ದಶಕದ ಆರಂಭದಲ್ಲಿ ಇದನ್ನು ಕಾರ್ಯಾಚರಣೆಗೆ ಅಳವಡಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಇದು ಸಹಸ್ರಾರು ರಾಕೆಟ್‌ಗಳನ್ನು ಧ್ವಂಸಗೊಳಿಸಿದೆ. ಈ ವ್ಯವಸ್ಥೆಯು ಶೇಕಡ 90ರಷ್ಟು ನಿಖರ ಎಂದು ಇಸ್ರೇಲ್ ಹೇಳಿದೆ.

ಐರನ್ ಬೀಮ್: ಲೇಸರ್ ತಂತ್ರಜ್ಞಾನವನ್ನು ಬಳಸುವ ಈ ವ್ಯವಸ್ಥೆಯ್ನು ಇಸ್ರೇಲ್‌ ರೂಪಿಸುತ್ತಿದೆ. ಇದನ್ನು ಕಾರ್ಯಾಚರಣೆಗಳಲ್ಲಿ ಬಳಕೆ ಮಾಡುತ್ತಿಲ್ಲ. ಆದರೆ, ಇದು ಈಗಿರುವ ವ್ಯವಸ್ಥೆಗಳಿಗಿಂತ ಕಡಿಮೆ ವೆಚ್ಚದ್ದು ಎಂದು ಇಸ್ರೇಲ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.