ಜೆರುಸಲೇಂ(ಪಿಟಿಐ/ಎಪಿ): ಇಸ್ರೇಲ್ ಮಾಜಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಮತ್ತೊಮ್ಮೆ ಪ್ರಧಾನಿ ಗಾದಿಗೆ ಏರುವ ಸಾಧ್ಯತೆ ಹೆಚ್ಚಿದೆ.
ನೇತನ್ಯಾಹು ನೇತೃತ್ವದ ಲಿಕುದ್ ಹಾಗೂ ರಿಲೀಜಿಯಸ್ ಜಿವೊನಿಸ್ಟ್, ಶಾಸ್ ಮತ್ತು ಯುನೈಟೆಡ್ ತೋರಾ ಜುದಾಯಿಸಂ ಪಕ್ಷಗಳನ್ನು ಒಳಗೊಂಡ ಒಕ್ಕೂಟವು ಇಸ್ರೇಲ್‌ನಲ್ಲಿ ಹೊಸ ಸರ್ಕಾರ ರಚಿಸುವ ನಿರೀಕ್ಷೆ ಇದೆ.
ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಚಲಾವಣೆಯಾಗಿದ್ದ ಮತಗಳ ಪೈಕಿ ಶೇ 85ರಷ್ಟು ಮತಗಳ ಎಣಿಕೆ ಬುಧವಾರ ಪೂರ್ಣಗೊಂಡಿದ್ದು, ನೇತನ್ಯಾಹು ನೇತೃತ್ವದ ಒಕ್ಕೂಟವು 65 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ.
‘ಕೇಂದ್ರೀಯ ಚುನಾವಣಾ ಸಮಿತಿಯು ಬುಧವಾರ ಒಟ್ಟು 40,81,243 ಮತಗಳ ಎಣಿಕೆ ಕಾರ್ಯ ನಡೆಸಿದೆ. ಈ ಪೈಕಿ 24,201 ಮತಗಳು ಅಮಾನ್ಯಗೊಂಡಿವೆ’ ಎಂದು ದಿ ಟೈಮ್ಸ್ ಆಫ್ ಇಸ್ರೇಲ್ ದಿನಪತ್ರಿಕೆ ವರದಿ ಮಾಡಿದೆ.
‘ಸದ್ಯ ಮುಕ್ತಾಯಗೊಂಡಿರುವ ಮತ ಎಣಿಕೆಯ ಆಧಾರದಲ್ಲಿ ನೇತನ್ಯಾಹು ನೇತೃತ್ವದ ಒಕ್ಕೂಟ 65 ಸ್ಥಾನಗಳನ್ನು ಜಯಿಸುವ ನಿರೀಕ್ಷೆ ಇದೆ. ಇನ್ನೂ ಸಾಕಷ್ಟು ಮತಗಳ ಎಣಿಕೆ ಬಾಕಿ ಇರುವುದರಿಂದ ಈ ಸಂಖ್ಯೆಯಲ್ಲಿ ಏರುಪೇರು ಆಗಬಹುದು’ ಎಂದೂ ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದೆ.
ನೇತನ್ಯಾಹು ನೇತೃತ್ವದ ಒಕ್ಕೂಟವು120 ಸ್ಥಾನಗಳ ಪೈಕಿ ಬಹುಮತಕ್ಕೆ ಅಗತ್ಯವಿರುವ 62 ಸ್ಥಾನಗಳನ್ನು ಗೆಲ್ಲಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿದ್ದವು.
ಜೆರುಸಲೇಂನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ 73 ವರ್ಷದ ನೇತನ್ಯಾಹು,‘ನಾವು ದೊಡ್ಡ ಗೆಲುವೊಂದರ ಹೊಸ್ತಿಲಿನಲ್ಲಿದ್ದೇವೆ. ದೇಶದಲ್ಲಿ ನಾನು ರಾಷ್ಟ್ರೀಯವಾದಿ ಸರ್ಕಾರ ಸ್ಥಾಪಿಸಲಿದ್ದೇನೆ. ಇಸ್ರೇಲ್‌ನ ಎಲ್ಲಾ ನಾಗರಿಕರನ್ನು ಸಮಾನವಾಗಿ ಕಾಣುತ್ತೇನೆ’ ಎಂದು ಹೇಳಿದ್ದಾರೆ.
‘ಯಾವ ಪಕ್ಷಕ್ಕೆ ಬಹುಮತ ದೊರೆತಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಎಣಿಕೆ ಪೂರ್ಣಗೊಳ್ಳುವವರೆಗೂ ನಾವೆಲ್ಲಾ ತಾಳ್ಮೆಯಿಂದ ಕಾಯೋಣ’ ಎಂದು ಹಂಗಾಮಿ ಪ್ರಧಾನಿ ಯಾಯಿರ್ ಲಪಿದ್ ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ.
ಫಲಿತಾಂಶ ತಮ್ಮ ಪರವಾಗಿಲ್ಲ ಎಂಬುದು ಲಪಿದ್ ಅವರಿಗೆ ಈಗಾಗಲೇ ಮನದಟ್ಟಾಗಿದೆ. ಹೀಗಾಗಿ ಮುಂದಿನ ವಾರ ಈಜಿಪ್ಟ್‌ನಲ್ಲಿ ನಿಗದಿಯಾಗಿರುವ ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ನಿರ್ಧಾರದಿಂದ ಅವರು ಹಿಂದೆ ಸರಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೇತನ್ಯಾಹು ಪ್ರಧಾನಿ ಹುದ್ದೆಗೆ ಏರಬಹುದು ಎಂಬ ಸುದ್ದಿ ಪ್ಯಾಲಿಸ್ಟೀನ್‌ನ ನಾಗರಿಕರನ್ನು ಆತಂಕಕ್ಕೆ ದೂಡಿದೆ. ಉಭಯ ರಾಷ್ಟ್ರಗಳ ನಡುವಣ ಬಿಕ್ಕಟ್ಟು ಮತ್ತೆ ಮುನ್ನೆಲೆಗೆ ಬಂದು ಹಿಂಸಾಚಾರಗಳು ನಡೆಯಬಹುದು ಎಂದು ಅಲ್ಲಿನ ಜನ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.