ADVERTISEMENT

‘It Was a Hard Hit’: ಇಲಾನ್ ಮಸ್ಕ್ ಜೊತೆಗಿನ ಸಂದರ್ಶನದಲ್ಲಿ ಡೊನಾಲ್ಡ್ ಟ್ರಂಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಆಗಸ್ಟ್ 2024, 3:30 IST
Last Updated 13 ಆಗಸ್ಟ್ 2024, 3:30 IST
   

ವಾಷಿಂಗ್ಟನ್: ಬಿಲಿಯನೇರ್ ಉದ್ಯಮಿ ಇಲಾನ್ ಮಸ್ಕ್ ಜೊತೆಗಿನ ಸಂದರ್ಶನದಲ್ಲಿ ತಮ್ಮ ಮೇಲೆ ನಡೆದ ಹತ್ಯಾಯತ್ನವು ‘ಹಾರ್ಡ್ ಹಿಟ್’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ನಿಮ್ಮಂಥವರ ಮೇಲೆ ಗುಂಡಿನ ದಾಳಿ ನಡೆದಿದ್ದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ಎಕ್ಸ್ ಮಾಲೀಕ ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, 'ಅದು ಅತ್ಯಂತ ಹಾರ್ಡ್ ಹಿಟ್ ಆಗಿತ್ತು, ಅದು ಅತಿವಾಸ್ತವಿಕ ಅನುಭವ ಎಂದು ನೀವು ಹೇಳಬಹುದು. ಆದರೆ, ನನಗೆ ಆ ರೀತಿ ಅನಿಸಲಿಲ್ಲ. ಬುಲೆಟ್‌ ನನ್ನ ಕಿವಿಗೆತಾಗಿದೆ ಎಂದು ನನಗೆ ತಿಳಿಯಿತು. ಆದರೂ ನಾನು ಧೃತಿಗೆಡಲಿಲ್ಲ’ಎಂದು ಅವರು ಹೇಳಿದ್ದಾರೆ.

ಬುಲೆಟ್ ತಾಗಿ ನಾನು ಕೆಳಗೆ ಬೀಳುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ಮೂಡಿದ ಏಕೈಕ ಪ್ರಶ್ನೆ ‘ಎಷ್ಟು ಜನರ ಹತ್ಯೆಯಾಗಿದೆಯೋ?’ ಎಂಬುದಷ್ಟೇ ಎಂದು ಹೇಳಿದ್ದಾರೆ.

ADVERTISEMENT

‘ಏಕೆಂದರೆ ಗುಂಡಿನ ದಾಳಿ ನಡೆದ ನನ್ನ ಪ್ರಚಾರ ಕಾರ್ಯಕ್ರಮಕ್ಕೆ ಬಹಳಷ್ಟು ಜನ ಸೇರಿದ್ದರು. ಹಾಗಾಗಿ ಎಷ್ಟು ಜನರ ಹತ್ಯೆಯಾಗಿದೆ ಎಂದು ಕೇಳಿದೆ. ಏಕೆಂದರೆ, ಪಕ್ಕದಲ್ಲಿ ಮತ್ತಷ್ಟು ಗುಂಡು ಹಾರಿಸಿರುವುದು ನನಗೆ ತಿಳಿದಿತ್ತು’ಎಂದು ಟ್ರಂಪ್ ಹೇಳಿದ್ದಾರೆ.

ಜುಲೈ 13ರಂದು ಪೆನ್ಸಿಲ್ವೇನಿಯಾದಲ್ಲಿ ಪ್ರಚಾರದ ವೇಳೆ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಕೂಡಲೇ ವೇದಿಕೆಗೆ ನುಗ್ಗಿ ಸೀರ್ಕೆಟ್ ಸರ್ವೀಸ್ ಏಜೆಂಟ್‌ಗಳು ಭದ್ರತೆ ಒದಗಿಸಿದ್ದರು.

ಬುಲೆಟ್, ಟ್ರಂಪ್ ಅವರ ಕಿವಿಯ ಮೇಲ್ಭಾಗಕ್ಕೆ ತಾಗಿತ್ತು. ಶೂಟರ್ ಅನ್ನು ಬೆಥೆಲ್ ಪಾರ್ಕ್‌ನ 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಎಫ್‌ಬಿಐ ಗುರುತಿಸಿತ್ತು.

ಎಕ್ಸ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆದ ಟ್ರಂಪ್ ಸಂದರ್ಶನವು ತಾಂತ್ರಿಕ ದೋಷದಿಂದ ರಾತ್ರಿ 8 ಗಂಟೆ ಬದಲು 8.45ಕ್ಕೆ ಶುರುವಾಗಿತ್ತು.

ಸೈಬರ್ ದಾಳಿಯಿಂದ ಸಂದರ್ಶನ ವಿಳಂಬವಾಯಿತು ಎಂದು ಮಸ್ಕ್ ಹೇಳಿದ್ದಾರೆ. ಟ್ರಂಪ್ ಹೇಳುವುದನ್ನು ಜನರು ಕೇಳದಂತೆ ತಡೆಯುವ ಯತ್ನ ಇದಾಗಿತ್ತು ಎಂದಿದ್ದಾರೆ.

ಟ್ರಂಪ್ ಸಂದರ್ಶನದ ಲೈವ್ ಸ್ಟ್ರೀಮಿಂಗ್‌ ವೀಕ್ಷಿಸಲು ಪ್ರಯತ್ನಿಸಿದ ಬಳಕೆದಾರರಿಗೂ ಸಹ ಪ್ರವೇಶ ಕಷ್ಟವಾಗಿತ್ತು.

ಸಂದರ್ಶನ ಆರಂಭವಾಗಬೇಕಿದ್ದ 8 ಗಂಟೆಯ ಸಮಯ ಮೀರಿ ಕೆಲವು ನಿಮಿಷಗಳ ಬಳಿಕ ‘crashed’,‘unable’ ಮತ್ತು #TwitterBlackout ಹ್ಯಾಷ್‌ ಟ್ಯಾಗ್‌ಗಳು ಟ್ರೆಂಡಿಂಗ್ ಆಗಿದ್ದವು ಎಂದು ಸಿಎನ್‌ಎನ್‌ ವರದಿ ಮಾಡಿದೆ.

ಡೆಸ್ಕ್‌ಟಾಪ್‌ನಲ್ಲಿ ಲೈವ್ ಸ್ಟ್ರೀಮ್ ವೀಕ್ಷಿಸಲು ಯತ್ನಿಸಿದ ಬಳಕೆದಾರರಿಗೆ ಮಂಕಿ ಎಮೋಜಿ ಜೊತೆ ಈ ಸ್ಟ್ರೀಮಿಂಗ್ ಲಭ್ಯವಿಲ್ಲ ಎಂಬ ಸಂದೇಶಗಳು ಕಂಡುಬಂದಿವೆ. ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರಯತ್ನಿಸಿದ ಅನೇಕರು ಚಲನೆಯಿಲ್ಲದ, ಬೂದುಬಣ್ಣದ ಪರದೆ ಕಂಡುಬಂದಿದೆ. ಹೀಗಾಗಿ, ಹಲವರಿಗೆ ಸಂದರ್ಶನ ವೀಕ್ಷಿಸಲು ಸಾಧ್ಯವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.