ರೋಮ್: ಇಟಲಿಯ ಉತ್ತರ ಭಾಗದಲ್ಲಿ ಜೀತದಾಳುಗಳಂತೆ ಕೆಲಸ ಮಾಡುತ್ತಿದ್ದ ಭಾರತ ಮೂಲದ 33 ಕೃಷಿ ಕಾರ್ಮಿಕರನ್ನು ಇಟಲಿ ಪೊಲೀಸರು ಶನಿವಾರ ರಕ್ಷಿಸಿದ್ದಾರೆ. ಇವರನ್ನು ಅಕ್ರಮವಾಗಿ ಬಂಧನದಲ್ಲಿರಿಸಿಕೊಂಡಿದ್ದ ಇಬ್ಬರಿಂದ ₹4.55 ಕೋಟಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಜೂನ್‌ನಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಹಣ್ಣು ಕೀಳುವ ಕೆಲಸ ಮಾಡುತ್ತಿದ್ದಾಗ, ಯಂತ್ರವೊಂದು ಅವರ ಕೈಯನ್ನು ಕತ್ತರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ತೀವ್ರವಾಗಿ ಗಾಯಗೊಂಡ ಈ ವ್ಯಕ್ತಿ ಹಾಗೂ ಇದೇ ರೀತಿ ಕೆಲಸ ಮಾಡುತ್ತಿದ್ದ ಇತರ ಕಾರ್ಮಿಕರ ಕುರಿತು ಸರ್ಕಾರ ತನಿಖೆ ಆರಂಭಿಸಿತ್ತು.
'ಭಾರತ ಮೂಲದ ವ್ಯಕ್ತಿಯೊಬ್ಬ ಅಲ್ಲಿನ ಜನರನ್ನು ಇಟಲಿಗೆ ಕರೆತಂದಿದ್ದಾನೆ. ಆಯಾ ಕೃಷಿ ಚಟುವಟಿಕೆಯ ಅವಧಿಯಲ್ಲಿ ಇವರಿಗೆ ಕೆಲಸದ ಪರವಾನಗಿ ಕೊಡಿಸುತ್ತಾನೆ. ಪ್ರತಿಯೊಬ್ಬರಿಗೆ 17 ಸಾವಿರ ಯೂರೊ (₹15 ಲಕ್ಷ) ಮತ್ತು ಉತ್ತಮ ಭವಿಷ್ಯದ ಭರವಸೆ ನೀಡಿ ವಂಚಿಸಲಾಗಿದೆ’ ಎಂದು ಆರೋಪಿಸಿ ಇಟಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಇಲ್ಲಿಗೆ ಕರೆತಂದವರಿಗೆ ಕೃಷಿ ಕೆಲಸಗಳನ್ನು ನೀಡಲಾಗುತ್ತದೆ. ಪ್ರತಿ ದಿನ 10ರಿಂದ 12 ಗಂಟೆಯಂತೆ ವಾರದ ಏಳೂ ದಿನಗಳ ಕಾಲ ಇವರು ಕೆಲಸ ಮಾಡುತ್ತಿದ್ದಾರೆ. ಗಂಟೆಗೆ ಕೇವಲ 4 ಯೂರೊಗಳನ್ನು ನೀಡಲಾಗುತ್ತಿದೆ. ತಾವು ಪಡೆದ ಸಾಲದ ಮೊತ್ತ ತೀರಿದ ನಂತರವಷ್ಟೇ ಇವರನ್ನು ಇಲ್ಲಿಂದ ಕಳಿಸಲಾಗುತ್ತದೆ. ಅಕ್ಷರಶಃ ಇವರನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿತ್ತು’ ಎಂದು ತನಿಖಾಧಿಕಾರಿ ಮಾಹಿತಿ ನೀಡಿದ್ದಾರೆ.
‘ಇನ್ನೂ ಕೆಲವರನ್ನು ಉಚಿತವಾಗಿ ದುಡಿಯಲು ಸೂಚಿಸುವುದರ ಜತೆಗೆ, ಕಾಯಂ ಕೆಲಸಕ್ಕೆ 13 ಸಾವಿರ ಯೂರೊ ನೀಡುವಂತೆಯೂ ಬೇಡಿಕೆ ಇಡಲಾಗಿದೆ ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ. ಇಂಥ ಕಾಯಂ ದುಡಿಯುವ ಪರವಾನಗಿಯನ್ನು ಯಾರಿಗೂ ಇಲ್ಲಿ ನೀಡುವುದಿಲ್ಲ’ ಎಂದಿದ್ದಾರೆ.
‘ಆರೋಪಿ ವಿರುದ್ಧ ಗುಲಾಮಗಿರಿ ನಡೆಸಿದ, ಕಾರ್ಮಿಕರ ಶೋಷಣೆ, ಕಾರ್ಮಿಕರಿಗೆ ಯಾವುದೇ ರಕ್ಷಣೆ ನೀಡದಿರುವ ಹಾಗೂ ಕಾನೂನುಬದ್ಧ ರಹವಾಸಿ ಪತ್ರ ನೀಡದಿರುವ ಪ್ರಕರಣ ದಾಖಲಿಸಲಾಗಿದೆ’ ಎಂದಿದ್ದಾರೆ.
ಯುರೋಪ್‌ನ ಇತರ ರಾಷ್ಟ್ರಗಳಂತೆ ಇಟಲಿ ಕೂಡಾ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದೆ. ಕಡಿಮೆ ವೇತನ ನೀಡಲಾಗುತ್ತಿರುವ ಉದ್ಯೋಗಗಳಲ್ಲಿ ವಲಸೆ ನೀತಿ ಮೂಲಕ ಕಾರ್ಮಿಕರನ್ನು ಕರೆತರಲಾಗುತ್ತಿದೆ. ಇದರಲ್ಲಿ ಸಾಕಷ್ಟು ವಂಚನೆಗಳೂ ನಡೆಯುತ್ತಿರುವ ಕುರಿತು ವರದಿಯಾಗುತ್ತಿದೆ.
2021ರ ದಾಖಲೆಗಳ ಪ್ರಕಾರ ಇಟಲಿಯಲ್ಲಿ ಅಕ್ರಮವಾಗಿ ಕೆಲಸ ಮಾಡುತ್ತಿರುವವರ ಸಂಖ್ಯೆ ಶೇ 11ರಷ್ಟಿದೆ. ಕೃಷಿ ಕ್ಷೇತ್ರದಲ್ಲಿ ಇದು ಶೇ 23ರಷ್ಟು ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.