ಸೀಬರ್ಡ್ ಹಡಗಿನೊಳಗಿಂದ: ಉತ್ತರ ಆಫ್ರಿಕಾದ ಲಿಬಿಯಾದಿಂದ ಯುರೋಪಿನತ್ತ ಮರದ ದೋಣೆಯಲ್ಲಿ ವಲಸೆ ಹೋಗುತ್ತಿದ್ದ ಮಕ್ಕಳು, ಮಹಿಳೆಯರು ಸೇರಿದಂತೆ 65 ಜನರನ್ನು ಇಟಲಿಯ ಹಡಗೊಂದು ಶನಿವಾರ ರಕ್ಷಿಸಿದೆ.
ಜನರಿಂದ ಕಿಕ್ಕಿರಿದಿದ್ದ ದೋಣಿಯ ಎಂಜಿನ್ ಸಮುದ್ರದ ಮಧ್ಯ ಭಾಗದಲ್ಲಿ ಕೆಟ್ಟು ಹೋಗಿತ್ತು. ಮೆಡಿಟರೇನಿಯನ್ ಸಮದ್ರದ ಮಧ್ಯ ಭಾಗದಲ್ಲಿ ಗಸ್ತು ಪರಿಶೀಲನೆ ನಡೆಸುವ ಎನ್‌ಜಿಒ ವಿಮಾನವೊಂದು ಇದನ್ನು ಗುರುತಿಸಿತ್ತು. ದೋಣಿಯಲ್ಲಿ ಇದ್ದವರ ಬಳಿ ಯಾವುದೇ ರೀತಿಯ ಜೀವ ರಕ್ಷಕ ಜಾಕೆಟ್‌ಗಳು ಇರಲಿಲ್ಲ. ಕೂಡಲೇ ಸಮೀಪದ ಬೌರಿ ತೈಲನಿಕ್ಷೇಪದ ಬಳಿಯಿದ್ದ ‘ಅಸೊ ವೆಂಟಿನೋವ್’ ಹಡಗಿನವರಿಗೆ ಮನವಿ ಮಾಡಿಕೊಂಡಿತು. ಬಳಿಕ ದೋಣಿಯಲ್ಲಿ ಇದ್ದವರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷ ಇಲ್ಲಿಯವರೆಗೆ ಸುಮಾರು 44,000 ಜನರು ಟುನೇಷಿಯಾ ಮತ್ತು ಲಿಬಿಯಾದಿಂದ ಮಧ್ಯ ಮೆಡಿಟರೇನಿಯನ್ ದಾಟುವ ಮೂಲಕ ಯುರೋಪ್ ಕಡಲ ತೀರವನ್ನು ತಲುಪಿದ್ದಾರೆ. ಕಳ್ಳಸಾಗಣೆದಾರರು ಇವರಲ್ಲಿ ಹಲವರನ್ನು ಅಪಾಯಕಾರಿ ದೋಣಿಗಳಲ್ಲಿ ಸಾಗಿಸಿದ್ದಾರೆ.
ಹೀಗೆ ವಲಸೆ ಬರುತ್ತಿರುವವರು ಉತ್ತರ ಆಫ್ರಿಕಾಕ್ಕೆ ಹತ್ತಿರುವಿರುವ ಇಟಲಿಯ ದ್ವೀಪವಾದ ಲ್ಯಾಂಪೆಡುಸಾದಲ್ಲಿ ಇಳಿಯುತ್ತಿದ್ದಾರೆ. ಒಂದೆಡೆ ವಲಸಿಗರ ಆಗಮನ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಮೆಡಿಟರೇನಿಯನ್ ಸಮುದ್ರದಲ್ಲಿ ಅವಘಡಗಳು ಸಂಭವಿಸುವುದೂ ಮುಂದುವರಿದಿವೆ. ಈ ವರ್ಷ ಇಂತಹ ದುರಂತಗಳಲ್ಲಿ 1,100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.