ADVERTISEMENT

ಪ್ರಭಾಕರನ್ ಜೀವಂತವೆಂಬ ತಮಿಳುನಾಡು ನಾಯಕನ ಮಾತು ತಳ್ಳಿಹಾಕಿದ ಲಂಕಾ

ಪಿಟಿಐ
Published 13 ಫೆಬ್ರುವರಿ 2023, 15:39 IST
Last Updated 13 ಫೆಬ್ರುವರಿ 2023, 15:39 IST
   

ಕೊಲೊಂಬೊ: ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ ಎಂಬ ಕಾಂಗ್ರೆಸ್‌ನ ಮಾಜಿ ನಾಯಕ, ವಿಶ್ವ ತಮಿಳು ಒಕ್ಕೂಟದ ಅಧ್ಯಕ್ಷ ಪಿ.ನೆಡುಮಾರನ್‌ ಹೇಳಿಕೆಯನ್ನು ಶ್ರೀಲಂಕಾ ಸೋಮವಾರ ತಳ್ಳಿ ಹಾಕಿದೆ.

ಸೋಮವಾರ ತಂಜಾವೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಪಿ. ನೆಡುಮಾರನ್, ‘ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್‌ಟಿಟಿಇ) ನಾಯಕ ಜೀವಂತವಿದ್ದಾರೆ. ಈಗ ಅವರು ಜನರ ಎದುರು ಬರಲು ಅನುಕೂಲಕರ ವಾತಾವರಣವಿದೆ’ ಎಂದು ಹೇಳಿದ್ದರು.

ನೆಡುಮಾರನ್‌ ಹೇಳಿಕೆಯನ್ನು ಅಲ್ಲಗಳೆದಿರುವ ಶ್ರೀಲಂಕಾದ ರಕ್ಷಣಾ ಸಚಿವಾಲಯ, ‘ಇದೊಂದು ತಮಾಷೆ’ ಎಂದು ಹೇಳಿದೆ.

ADVERTISEMENT

‘2009ರ 19 ಮೇ ರಂದು ಪ್ರಭಾಕರನ್‌ ಅವರನ್ನು ಹತ್ಯೆ ಮಾಡಲಾಗಿದೆ. ಡಿಎನ್‌ಎ ಪರೀಕ್ಷೆಯೂ ಅದನ್ನು ಸಾಬೀತುಪಡಿಸಿದೆ’ ಎಂದು ಶ್ರೀಲಂಕಾದ ರಕ್ಷಣಾ ಸಚಿವಾಲಯದ ವಕ್ತಾರ, ಕರ್ನಲ್ ನಳಿನ್ ಹೆರಾತ್ ಪಿಟಿಐಗೆ ತಿಳಿಸಿದರು.

ಶ್ರೀಲಂಕಾದ ಸೇನೆಯು 1983ರಲ್ಲಿ ಎಲ್‌ಟಿಟಿ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಮೂರು ದಶಕಗಳ ಈ ಅಂತರ್ಯುದ್ಧವನ್ನು ಪ್ರಭಾಕರನ್‌ ಹತ್ಯೆಯ ಮೂಲಕ 2009ರಲ್ಲಿ ಅಂತ್ಯಗೊಳಿಸಲಾಗಿತ್ತು.

ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ತಮಿಳರಿಗೆ ಸ್ವಾಯತ್ತ ರಾಜ್ಯ ರಚನೆಯಾಗಬೇಕೆಂದು ಬೇಡಿಕೆಯೊಂದಿಗೆ ಎಲ್‌ಟಿಟಿಇ ಹೋರಾಡುತ್ತಿತ್ತು.

ಶ್ರೀಲಂಕಾ ಸೇನೆಯಿಂದ ಪ್ರಭಾಕರನ್ ಹತ್ಯೆಯಾಗಿದ್ದು ಯಾವಾಗ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲವಾದರೂ, 2009ರ ಮೇ 19ರಂದು ಅವರ ಮರಣದ ಸುದ್ದಿಯನ್ನು ಘೋಷಿಸಲಾಗಿತ್ತು.

2009ರ ಮೇ 18ರಂದು ಶ್ರೀಲಂಕಾದ ಅಂದಿನ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು 26 ವರ್ಷಗಳ ಯುದ್ಧ ಅಂತ್ಯಗೊಂಡಿದೆ ಎಂದು ಘೋಷಿಸಿದ್ದರು. ಇದರಲ್ಲಿ 1,00,000 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದು, ಲಕ್ಷಾಂತರ ಮಂದಿ ಶ್ರೀಲಂಕನ್ನರು, ಮುಖ್ಯವಾಗಿ ಅಲ್ಪಸಂಖ್ಯಾತ ತಮಿಳರು ನೆಲೆ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.