ADVERTISEMENT

US Presidential Election:ಇದೀಗ ಅಧಿಕೃತ; ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ

ಪಿಟಿಐ
Published 16 ಜುಲೈ 2024, 13:51 IST
Last Updated 16 ಜುಲೈ 2024, 13:51 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

(ರಾಯಿಟರ್ಸ್ ಚಿತ್ರ)

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಔಪಚಾರಿಕವಾಗಿ ಆಯ್ಕೆ ಮಾಡಲಾಗಿದೆ.

ADVERTISEMENT

ಡೊನಾಲ್ಡ್ ಟ್ರಂಪ್ ನಾಮನಿರ್ದೇಶನದ ಕುರಿತು ಸೋಮವಾರ ನಡೆದ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಘೋಷಿಸಲಾಗಿದೆ.

ಇದರೊಂದಿಗೆ 2016ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಟ್ರಂಪ್ ಅವರು ಮತ್ತೆ ಅಧಿಕೃತವಾಗಿ ಚುನಾವಣಾ ಅಖಾಡಕ್ಕಿಳಿದಿದ್ದಾರೆ.

2016ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ 78 ವರ್ಷದ ಟ್ರಂಪ್, 2020ರಲ್ಲಿ ಜೋ ಬೈಡನ್ ವಿರುದ್ಧ ಸೋಲು ಕಂಡಿದ್ದರು. ಈಗ ಸತತ ಮೂರನೇ ಬಾರಿಗೆ ರಿಪಬ್ಲಿಕನ್ ಪಕ್ಷದಿಂದ ನಾಮನಿರ್ದೇಶನಗೊಂಡಿದ್ದಾರೆ.

ವ್ಯಾನ್ಸ್‌ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ

ಅಮೆರಿಕ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಪಕ್ಷದ ಒಹಿಯೊ ಸೆನೆಟರ್ ಜೆ.ಡಿ.ವ್ಯಾನ್ಸ್ ಅವರನ್ನು ಆಯ್ಕೆ ಮಾಡಲಾಗಿದ್ದು ಇಲ್ಲಿ ಆರಂಭವಾಗಿರುವ ಪಕ್ಷದ ಸಮಾವೇಶದಲ್ಲಿ ಡೊನಾಲ್ಡ್‌ ಟ್ರಂಪ್‌ ಈ ಕುರಿತ ಘೋಷಣೆ ಮಾಡಿದ್ದಾರೆ. 39 ವರ್ಷದ ವ್ಯಾನ್ಸ್‌ ಅವರು ಭಾರತೀಯ ಅಮೆರಿಕನ್ ಉಷಾ ಚಿಲುಕೂರಿ ಅವರನ್ನು ಮದುವೆಯಾಗಿದ್ದಾರೆ. ಉಷಾ ಅವರು ಮೂಲತಃ ಆಂಧ್ರಪ್ರದೇಶದವರು. ‘ಸುದೀರ್ಘ ಚರ್ಚೆ ಹಾಗೂ ಸಂವಾದದ ಬಳಿಕ ಅಮೆರಿಕದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಲು ಸೆನೆಟರ್‌ ಜೆ.ಡಿ.ವ್ಯಾನ್ಸ್‌ ಅವರೇ ಸೂಕ್ತ ವ್ಯಕ್ತಿ ಎಂಬ ನಿರ್ಧಾರ ಬರಲಾಯಿತು’ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್‌ ಬರೆದುಕೊಂಡಿದ್ದಾರೆ. ‘ವ್ಯಾನ್ಸ್‌ ಅವರು ಅಮೆರಿಕದ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಒಹಿಯೊ ಸ್ಟೇಟ್‌ ವಿಶ್ವವಿದ್ಯಾಲಯದಲ್ಲಿ ಪದವಿ ಯಾಲೆ ಕಾನೂನು ಕಾಲೇಜಿನಿಂದ ಕಾನೂನಿನಲ್ಲಿ ಪದವಿ ಪೂರೈಸಿದ್ದಾರೆ. ‘ಯಾಲೆ ಲಾ ಜರ್ನಲ್‌’ನ ಸಂಪಾದಕ ಹಾಗೂ ‘ಲಾ ವೆಟೆರನ್ಸ್ ಅಸೋಸಿಯೇಶನ್’ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ’ ಎಂದು ಟ್ರಂಪ್‌ ಹೇಳಿದ್ದಾರೆ. ವ್ಯಾನ್ಸ್‌ ಅವರ ‘ಹಿಲ್‌ಬಿಲಿ ಎಲಜಿ’ ಎಂಬ ಕೃತಿ ಭಾರಿ ಜನಪ್ರಿಯತೆ ಗಳಿಸಿದ್ದು ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ. ಈ ಕೃತಿ ಆಧರಿಸಿ ಚಲನಚಿತ್ರವನ್ನೂ ನಿರ್ಮಿಸಲಾಗಿದೆ ಎಂದೂ ಹೇಳಿದ್ದಾರೆ.

ಗಮನ ಸೆಳೆದಿರುವ ಉಷಾ ಚಿಲುಕೂರಿ

ಸೆನೆಟರ್‌ ಜೆ.ಡಿ.ವ್ಯಾನ್ಸ್‌ ಅವರು ಅಮೆರಿಕ ಉಪಾಧ್ಯಕ್ಷ ಸ್ಥಾನದ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದ ಬೆನ್ನಲ್ಲೇ ವ್ಯಾನ್ಸ್‌ ಪತ್ನಿ ಭಾರತೀಯ ಅಮೆರಿಕನ್‌ ಉಷಾ ಚಿಲುಕೂರಿ ಅವರೂ ರಾಷ್ಟ್ರದ ಗಮನ ಸೆಳೆದಿದ್ದಾರೆ. ವೃತ್ತಿಯಿಂದ ವಕೀಲರಾಗಿರುವ 38 ವರ್ಷದ ಉಷಾ ಅವರು ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಪತಿ ವ್ಯಾನ್ಸ್‌ ಅವರನ್ನು ಆಯ್ಕೆ ಮಾಡಿರುವ ಕುರಿತು ಘೋಷಣೆಯಾಗುತ್ತಿದ್ದಂತೆಯೇ ಉಷಾ ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಈ ವೇಳೆ ವ್ಯಾನ್ಸ್‌–ಉಷಾ ದಂಪತಿ ಸಮಾವೇಶದಲ್ಲಿ ಪಾಲ್ಗೊಂಡಿದ್ದವರನ್ನು ಕೃತಜ್ಞತೆ ಸಲ್ಲಿಸಿದರು. ಪಾಲಕರು ಅಮೆರಿಕಕ್ಕೆ ವಲಸೆ ಹೋದ ನಂತರ ಉಷಾ ಅವರು ತಮ್ಮ ಬಾಲ್ಯವನ್ನು ಸ್ಯಾನ್‌ ಡಿಯಾಗೊನಲ್ಲಿ ಕಳೆದರು.  ಯಾಲೆ ಲಾ ಸ್ಕೂಲ್‌ನಿಂದ ಪದವಿ ಪಡೆದ ನಂತರ ಉಷಾ ಅವರು ಮುಂಗರ್‌ನಲ್ಲಿ ಅಟಾರ್ನಿಯಾಗಿ ಸೇವೆ ಆರಂಭಿಸಿದರು. ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಜಾನ್‌ ರಾಬರ್ಟ್ಸ್ ನ್ಯಾಯಮೂರ್ತಿ ಬ್ರೆಟ್‌ ಕವನಾಗ್ ಅವರ ಸಹಾಯಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಯಾಲೆ ಲಾ ಸ್ಕೂಲ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾಗ ಪರಿಚಿತರಾದ ಉಷಾ ಮತ್ತು ವ್ಯಾನ್ಸ್‌ 2014ರಲ್ಲಿ ಮದುವೆಯಾದರು. ದಂಪತಿಗೆ ಪುತ್ರರಾದ ಎವಾನ್ ವಿವೇಕ್‌ ಹಾಗೂ ಪುತ್ರಿ ಮಿರಾಬೆಲ್ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.