ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಆಪ್ತ ಸಹಾಯಕಿಗೂ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ, ಶ್ವೇತಭವನದಲ್ಲಿ ಕಾರ್ಯನಿರ್ವಹಿಸುವವರಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಆದರೆ, ಸೋಂಕಿತೆಯು ಕಳೆದ ಕೆಲವು ವಾರಗಳಿಂದ ಇವಾಂಕಾ ಸಂಪರ್ಕದಲ್ಲಿ ಇರಲಿಲ್ಲ ಎಂದು ಸಿಎನ್‌ಎನ್ ಸುದ್ದಿವಾಹಿನಿ ವರದಿ ಮಾಡಿದೆ.
ಎರಡು ತಿಂಗಳುಗಳಿಂದ ಆಕೆ ಕಚೇರಿಗೆ ಬಂದಿರಲಿಲ್ಲ. ಆಕೆಯಲ್ಲಿ ಸೋಂಕಿನ ಲಕ್ಷಣಗಳೂ ಕಾಣಿಸಿರಲಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಇದೀಗ ಇವಾಂಕಾ ಮತ್ತು ಆಕೆಯ ಪತಿ ಜೇರೆಡ್ ಕುಶ್ನರ್ ಅವರ ಮಾದರಿಗಳನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿದೆ ಎಂದು ಟ್ರಂಪ್ ಕಟುಂಬದ ಆಪ್ತ ಮೂಲಗಳು ಹೇಳಿವೆ.
ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಹಾಯಕನಿಗೆ ಕೊರೊನಾ ತಗುಲಿರುವುದು ಎರಡು ದಿನ ಹಿಂದಷ್ಟೇ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಪ್ರತಿ ದಿನ ಸೋಂಕು ಪತ್ತೆ ಪರೀಕ್ಷೆಗೆ ಒಳಗಾಗುವುದಾಗಿ ಟ್ರಂಪ್ ಹೇಳಿದ್ದರು. ಉಪಾಧ್ಯಕ್ಷಮೈಕ್ ಪೆನ್ಸ್ ಸೇರಿದಂತೆ ಶ್ವೇತ ಭವನದ ಎಲ್ಲರೂ ಪ್ರತಿ ದಿನ ಕೊರೊನಾ ಪರೀಕ್ಷೆಗೆ ಒಳಗಾಗುವುದಾಗಿಯೂ ಅವರು ತಿಳಿಸಿದ್ದರು.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶ ಪ್ರಕಾರ ಅಮೆರಿಕದಾದ್ಯಂತ ಈವರೆಗೆ ಕೊರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 80,300 ತಲುಪಿದೆ. ಒಟ್ಟಾರೆಯಾಗಿ 13,47,309 ಮಂದಿಗೆ ಸೋಂಕು ತಗುಲಿದೆ.
ಜಗತ್ತಿನಾದ್ಯಂತ ಈವರೆಗೆ 41, 01,973 ಜನರಿಗೆ ಸೋಂಕು ತಗುಲಿದ್ದು, ಮೃತರ ಸಂಖ್ಯೆ 2,80,451ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:ಎಲ್ಲ ವೀಸಾ ರದ್ದುಡಿಸಲು ಟ್ರಂಪ್ಗೆ ಆಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.