ADVERTISEMENT

ನ್ಯಾಯಾಧೀಶರು ಚಕ್ರವರ್ತಿಗಳೂ ಅಲ್ಲ, ಸಾರ್ವಭೌಮರೂ ಅಲ್ಲ: CJI ಡಿ.ವೈ.ಚಂದ್ರಚೂಡ್

ಪಿಟಿಐ
Published 15 ಮೇ 2024, 10:29 IST
Last Updated 15 ಮೇ 2024, 10:29 IST
<div class="paragraphs"><p>ಬ್ರೆಜಿಲ್‌ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ ಜೆ20 ಶೃಂಗದಲ್ಲಿ ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಮಾತನಾಡಿದರು</p></div>

ಬ್ರೆಜಿಲ್‌ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ ಜೆ20 ಶೃಂಗದಲ್ಲಿ ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಮಾತನಾಡಿದರು

   

ಪಿಟಿಐ ಚಿತ್ರ

ನವದೆಹಲಿ: ‘ಸಾರ್ವಜನಿಕರ ಹಕ್ಕುಗಳನ್ನು ಎತ್ತಿಹಿಡಿಯುವ ಉದ್ದೇಶಕ್ಕಾಗಿಯೇ ನ್ಯಾಯಾಂಗವಿದೆ. ಇಲ್ಲಿ ಉತ್ತರದಾಯಿತ್ವದಿಂದ ಹೊರತಾಗಿ ಯಾರೂ ಇಲ್ಲ. ಇದರ ಭಾಗವಾಗಿರುವ ನ್ಯಾಯಾಧೀಶರು ಚಕ್ರವರ್ತಿಗಳೂ ಅಲ್ಲ, ಸಾರ್ವಭೌಮರೂ ಅಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ರಿಯೊ ಡಿ ಜನೈರೊದಲ್ಲಿ  ಬ್ರೆಜಿಲ್‌ನ ಫೆಡರಲ್‌ ಸುಪ್ರೀಂ ಕೋರ್ಟ್‌ ನೇತೃತ್ವದಲ್ಲಿ ಆಯೋಜಿಸಲಾಗಿರುವ ಜೆ20 ಶೃಂಗದಲ್ಲಿ ಮಾತನಾಡಿದ ಅವರು, ‘ಡಿಜಿಟಲ್‌ ಪರಿವರ್ತನೆ ಮತ್ತು ತಂತ್ರಜ್ಞಾನದ ಬಳಕೆಯು ನ್ಯಾಯಾಂಗದ ಕಾರ್ಯಕ್ಷಮತೆಯನ್ನು ಹೆಚ್ಚಿಸಿದೆ. ವರ್ಚುವಲ್‌ ವಿಚಾರಣೆ ಮೂಲಕ ಸುಪ್ರೀಂ ಕೋರ್ಟ್‌ ತಲುಪಲು ಪ್ರತಿ ಪ್ರಜೆಗೂ ಸಾಧ್ಯವಾದಂತಾಗಿದೆ’ ಎಂದರು.

‘ನ್ಯಾಯಾಂಗವನ್ನೂ ಒಳಗೊಂಡು ಕಾನೂನು ಮತ್ತು ತನಿಖಾ ಸಂಸ್ಥೆಗಳ ನಡುವೆ ತಂತ್ರಜ್ಞಾನವು ಕೊಂಡಿಯಂತೆ ಕೆಲಸ ಮಾಡುತ್ತಿದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕ 7.5 ಲಕ್ಷ ಪ್ರಕರಣಗಳ ವಿಚಾರಣೆ ನಡೆಸಲಾಗಿದೆ. 1.5 ಲಕ್ಷ ಪ್ರಕರಣಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗಿವೆ’ ಎಂದು ತಿಳಿಸಿದರು.

‘ಮುಕ್ತ ಹಾಗೂ ಓಪನ್ ಸೋರ್ಸ್‌ ತಂತ್ರಾಂಶವನ್ನು ಬಳಸಿ ಭಾರತದ ಸುಪ್ರೀಂ ಕೋರ್ಟ್‌ ಪ್ರಕರಣಗಳ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದು ಇಡೀ ಜಗತ್ತಿನಲ್ಲೇ ಅತಿ ದೊಡ್ಡ ವ್ಯವಸ್ಥೆಯಾಗಿದೆ. ಕೋವಿಡ್‌–19 ಸಂದರ್ಭ ಮಾತ್ರವಲ್ಲದೇ, ಈಗಲೂ ಹೈಬ್ರಿಡ್ (ನ್ಯಾಯಾಲಯದ ಆವರಣ ಹಾಗೂ ವರ್ಚುವಲ್ ವೇದಿಕೆ) ವ್ಯವಸ್ಥೆ ಚಾಲ್ತಿಯಲ್ಲಿದೆ. ಅದರಲ್ಲೂ ವರ್ಚುವಲ್ ವೇದಿಕೆಯಲ್ಲಿ ನಡೆಯುವ ವಿಚಾರಣೆಗಳು, ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗದವರಿಗೆ ಹೆಚ್ಚು ಅನುಕೂಲಕರವಾಗಿದೆ’ ಎಂದು ಪ್ರತಿಪಾದಿಸಿದರು.

‘ಸುಪ್ರೀಂ ಕೋರ್ಟ್‌ನ ಕಲಾಪಗಳು ಯುಟ್ಯೂಬ್ ಚಾನಲ್‌ನಲ್ಲಿ ನೇರ ಪ್ರಸಾರವಾಗುತ್ತಿದೆ. ಆ ಮೂಲಕ ಸಂವಿಧಾನವನ್ನು ಪ್ರತಿ ಮನೆ ಹಾಗೂ ಪ್ರತಿ ನಾಗರಿಕರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್‌ನ ಬಹುತೇಕ ಕೆಲಸಗಳು ಈಗ ಕಾಗದರಹಿತವಾಗಿವೆ. ಅಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್‌ ಕಾಗದ ಬಳಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

'ಈವರೆಗೂ 36 ಸಾವಿರ ಪ್ರಕರಣಗಳನ್ನು ಭಾರತದ 16 ಬೇರೆ ಭಾಷೆಗಳಿಗೆ ಭಾಷಾಂತರಿಸಲಾಗಿದೆ. 30 ಸಾವಿರಕ್ಕೂ ಹೆಚ್ಚಿನ ಹಳೆಯ ಪ್ರಕರಣಗಳು ಉಚಿತವಾಗಿ ಲಭ್ಯವಿದೆ. ಇಷ್ಟು ಮಾತ್ರವಲ್ಲ, ಭಾರತದಲ್ಲಿ 2007ರಲ್ಲೇ ಇ–ನ್ಯಾಯಾಲಯ ಯೋಜನೆ ಅಸ್ತಿತ್ವಕ್ಕೆ ಬಂದಿತು. ಪ್ರಕರಣ ದಾಖಲಿಸಲೂ ಈಗ ಇ–ಫೈಲಿಂಗ್ ವೇದಿಕೆ ಇದ್ದು, ಕೇವಲ ಒಂದು ಬಟನ್ ದೂರದಲ್ಲಿದೆ. ಈವರೆಗೂ ಸುಮಾರು 1.5ಲಕ್ಷ ಪ್ರಕರಣಗಳು ಇ–ಫೈಲಿಂಗ್ ಮೂಲಕ ನ್ಯಾಯಾಲಯದಲ್ಲಿ ದಾಖಲಾಗಿವೆ. ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ದಾಖಲಾಗುವ ಇಂಥ ಪ್ರಕರಣಗಳು ಸುಪ್ರೀಂ ಕೋರ್ಟ್ ನಿಗಾದಲ್ಲಿರುತ್ತವೆ. ಇದಕ್ಕಾಗಿ ಐಜ್ಯೂರಿಸ್ ಎಂಬ ರಾಷ್ಟ್ರೀಯ ನ್ಯಾಯಾಂಗ ಮಾಹಿತಿ ಕೋಶದಲ್ಲಿ ದಾಖಲಾಗಿರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.