ವಾಷಿಂಗ್ಟನ್: ಸಾಕ್ಷ್ಯಾಧಾರಗಳ ಕೊರತೆಯಿಂದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂಡುಲಾ ಅವರನ್ನು ಅಪಘಾತದಲ್ಲಿ ಕೊಂದ ಸಿಯಾಟಲ್ ಪೊಲೀಸ್ ಅಧಿಕಾರಿ ಕೇವಿನ್ ಡೇವ್ ಶಿಕ್ಷೆಯಿಂದ ಪಾರಾಗಿದ್ದಾರೆ.
‘ಜಾಹ್ನವಿ ಕಂಡುಲಾ ಅವರ ಸಾವು ಹೃದಯವಿದ್ರಾವಕವಾಗಿದೆ. ಈ ಸಾವು ಪ್ರಪಂಚದಾದ್ಯಂತ ವಿವಿಧ ಸಮುದಾಯಗಳ ಮೇಲೆ ಪರಿಣಾಮ ಬೀರಿದೆ. ಇದೊಂದು ಕ್ರಿಮಿನಲ್ ಪ್ರಕರಣವೆಂದು ಸಾಬೀತುಪಡಿಸಲು ವಾಷಿಂಗ್ಟನ್ ಸ್ಟೇಟ್ ಕಾನೂನಿನಡಿಯಲ್ಲಿ ಸಾಕಷ್ಟು ಪುರಾವೆಗಳ ಕೊರತೆಯಿದೆ’ ಎಂದು ಕಿಂಗ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಸಿಯಾಟಲ್‌ನ ಸೌತ್ ಲೇಕ್ ಯೂನಿಯನ್‌ನಲ್ಲಿರುವ ನಾರ್ಥ್ ಈಸ್ಟ್ ವಿಶ್ವವಿದ್ಯಾಲಯದ ಆವರಣದಲ್ಲಿ 'ಇನ್‌ಫಾರ್ಮೆಶನ್ಸ್ ಸಿಸ್ಟಮ್' ಪದವಿ ಓದುತ್ತಿದ್ದ ಆಂಧ್ರಪ್ರದೇಶದ ಕಡಪ ಮೂಲದ ಜಾಹ್ನವಿ ಕಂಡುಲಾ ಅವರು 2023 ಜನವರಿ 23ರಂದು ರಸ್ತೆ ದಾಟುವಾಗ ಪೊಲೀಸ್ ಗಸ್ತು ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದರು.
ಅಂದು ಪೊಲೀಸ್ ಅಧಿಕಾರಿ ಕೇವಿನ್ ಡೇವ್ ಕಾರು ಚಲಾಯಿಸುತ್ತಿದ್ದರು. ಡ್ರಗ್ಸ್ ಪ್ರಕರಣವೊಂದರ ವರದಿ ಮಾಡಲು ವಾಹನವನ್ನು ವೇಗವಾಗಿ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.
ಜಾಹ್ನವಿ ಕಂಡುಲಾ ಅವರ ಸಾವಿನ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬ ಕೀಳುಮಟ್ಟದಲ್ಲಿ ಮಾತನಾಡಿದ ವಿಡಿಯೊವೊಂದು ಇತ್ತೀಚೆಗೆ ಹರಿದಾಡಿದ್ದು, ಅಮೆರಿಕದ ಪೊಲೀಸ್ ಅಧಿಕಾರಿಗಳ ದರ್ಪದ ಬಗ್ಗೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.