ADVERTISEMENT

ವಿಡಿಯೊ ಮೀಟಿಂಗ್‌ನಲ್ಲಿ ಕಾಣಿಸಿಕೊಂಡ ಜಾಕ್ ಮಾ: ಚೀನಾ ಮಾಧ್ಯಮಗಳ ವರದಿ

ರಾಯಿಟರ್ಸ್
Published 20 ಜನವರಿ 2021, 6:50 IST
Last Updated 20 ಜನವರಿ 2021, 6:50 IST
ಜಾಕ್ ಮಾ: ಪಿಟಿಐ ಚಿತ್ರ
ಜಾಕ್ ಮಾ: ಪಿಟಿಐ ಚಿತ್ರ   

ಬೀಜಿಂಗ್: ಕಳೆದ ಎರಡು ತಿಂಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಅಲಿಬಾಬಾ ಗ್ರೂಪ್ ಆಫ್ ಕಂಪನಿ ಸಂಸ್ಥಾಪಕ ಜಾಕ್ ಮಾ ಅವರು ಚೀನಾದಲ್ಲಿ ಬುಧವಾರ 100 ಗ್ರಾಮೀಣ ಶಿಕ್ಷಕರನ್ನು ವಿಡಿಯೊ ಸಭೆೆ‌ ಮೂಲಕ ಭೇಟಿಯಾದರು ಎಂದು ಸ್ಥಳೀಯ ಸರ್ಕಾರಿ ಮಾಧ್ಯಮ ವರದಿ ಮಾಡಿದೆೆ.

ಈ ಮೂಲಕ ಉದ್ಯಮಿ ಜಾಕ್ ಮಾ ಕಳೆದ ಅಕ್ಟೋಬರ್‌ನಿಂದ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಂತಾಗಿದೆ.

ಸರ್ಕಾರಿ ಬೆಂಬಲಿತ ನ್ಯೂಸ್ ಪೋರ್ಟಲ್ ಝೇಜಿಯಾಂಗ್ ಆನ್‌ಲೈನ್‌ನ ಟಿಯಾನ್ಮು ನ್ಯೂಸ್ ಬುಧವಾರ ಜಾಕ್ ಮಾ ಅವರು ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿರುವ ಬಗ್ಗೆ ವರದಿ ಮಾಡಿದೆ.

ADVERTISEMENT

ನೇರ ನುಡಿಯ ವ್ಯಕ್ತಿತ್ವದ ಜಾಕ್ ಮಾ, ಅದೊಂದು ದಿನ ಚೀನಾದ ಕಮ್ಯುನಿಸ್ಟ್ ಸರ್ಕಾರವನ್ನು ಬಹಿರಂಗವಾಗಿ ಟೀಕಿಸಿದ್ದರು. ಅಕ್ಟೋಬರ್ 24 ರಂದು ಶಾಂಘೈ ಸಮ್ಮೇಳನದಲ್ಲಿ ಚೀನಾದಲ್ಲಿ ನಾವಿನ್ಯತೆಯನ್ನು ನಿಗ್ರಹಿಸಲಾಗುತ್ತಿದೆ ಎಂದು ಹೇಳಿದ್ದರು. ಚೀನಾದ ಬ್ಯಾಂಕ್‌ಗಳು ಗಿರವಿ ಅಂಗಡಿಗಳಂತಾಗಿವೆ, ಹೆಚ್ಚು ಠೇವಣಿ ಇಟ್ಟವರಿಗೆ ಮಾತ್ರ ಸಾಲ ನೀಡಲಾಗುತ್ತಿದೆ ಎಂದು ಜರಿದಿದ್ದರು. ವಿಶ್ವದ ಅತಿ ದೊಡ್ಡ ಐಪಿಒ ಅನಾವರಣಗೊಳಿಸುವ ಯೋಜನೆಯಲ್ಲಿದ್ದ ಜಾಕ್ ಮಾ, ಇದಕ್ಕೂ ಒಂದು ತಿಂಗಳ ಮುಂಚೆ ಚೀನಾ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

ಇದಾದ ಒಂದು ತಿಂಗಳ ಬಳಿಕ ಅಲಿಬಾಬಾ ಸಂಸ್ಥೆ ವಿರುದ್ಧ ಚೀನಾ ಸರ್ಕಾರ ಏಕಸ್ವಾಮ್ಯ ವಿರೋಧಿ ತನಿಖೆ ಆರಂಭಿಸಿತು. ಅಂದಿನಿಂದ ಚೀನಾ ಹೆಜ್ಜೆ ಹೆಜ್ಜೆಗೂ ಜಾಕ್ ಮಾ ಟೆಕ್ ಸಾಮ್ರಾಜ್ಯವನ್ನು ನಿಗ್ರಹಿಸುವ ಪ್ರಯತ್ನ ನಡೆಸಿದೆ. ಕೋವಿಡ್ ಕಾಲದಲ್ಲಿ ಅಧಿಕ ನಷ್ಟ ಅನುಭವಿಸಿದ್ದ ಅಲಿಬಾಬಾ ಗ್ರೂಪ್ ಚೇತರಿಕೆಗೆ ಜಾಕ್ ಮಾ ಆಡಿದ ಮಾತುಗಳೇ ಮುಳುವಾಗಿವೆ. ಬಾಯಿ ಜಾರಿದ ಪದಗಳಿಂದಾಗಿ ಚೀನಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ವರದಿಯಾಗಿದ್ದವ. ಚೀನಾದಲ್ಲಿ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಧ್ವನಿ ಎತ್ತಿದವರನ್ನು ನಿಗ್ರಹಿಸಿದ ಹಲವು ಉದಾಹರಣೆಗಳಿವೆ. ಅದರ ಮುಂದುವರಿದ ಭಾಗವೇ ಜಾಕ್ ಮಾ ನಾಪತ್ತೆ ಎಂದು ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.