ADVERTISEMENT

SCO Summit: ಪಾಕ್‌ನಲ್ಲಿ ಜೈಶಂಕರ್‌‌ಗೆ ಸ್ವಾಗತ

ನೆರೆಯ ದೇಶಕ್ಕೆ 9 ವರ್ಷಗಳ ನಂತರ ಭೇಟಿ ನೀಡಿದ ಭಾರತದ ವಿದೇಶಾಂಗ ಸಚಿವ

ಪಿಟಿಐ
Published 15 ಅಕ್ಟೋಬರ್ 2024, 16:17 IST
Last Updated 15 ಅಕ್ಟೋಬರ್ 2024, 16:17 IST
<div class="paragraphs"><p>ಜೈಶಂಕರ್‌</p></div>

ಜೈಶಂಕರ್‌

   

(ಸಂಗ್ರಹ ಚಿತ್ರ)

ಇಸ್ಲಾಮಾಬಾದ್‌/ನವದೆಹಲಿ: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಲು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಮಂಗಳವಾರ ಇಸ್ಲಾಮಾಬಾದ್‌ ತಲುಪಿದ್ದಾರೆ. 

ADVERTISEMENT

ಕಾಶ್ಮೀರ ಸಮಸ್ಯೆ ಮತ್ತು ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿರುವಾಗ, ಸುಮಾರು ಒಂಬತ್ತು ವರ್ಷಗಳ ನಂತರ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ಭೇಟಿ ನೀಡಿರುವುದು ಇದೇ ಮೊದಲು. ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವರಾಗಿದ್ದಾಗ 2015ರ ಡಿಸೆಂಬರ್‌ನಲ್ಲಿ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದರು.

ರಾವಲ್ಪಿಂಡಿಯ ವಾಯು ನೆಲೆಗೆ ಬಂದಿಳಿದ ಜೈಶಂಕರ್ ಅವರನ್ನು ಪಾಕಿಸ್ತಾನ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ಸ್ವಾಗತಿಸಿದರು. 

ಇತ್ತೀಚೆಗಷ್ಟೇ ಕಾಶ್ಮೀರವನ್ನು ಪ್ಯಾಲೆಸ್ಟೀನ್‌ ಜತೆಗೆ ಸಮೀಕರಿಸಿ, ಈ ಎರಡೂ ಪಾಕಿಸ್ತಾನದ ಕಳಕಳಿಯ ವಿಷಯಗಳೆಂದು ಹೇಳಿಕೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಐಶಾಕ್ ದರ್ ಅವರೊಂದಿಗೆ ಯಾವುದೇ ದ್ವಿಪಕ್ಷೀಯ ಮಾತುಕತೆಯ ಸಾಧ್ಯತೆಯನ್ನು ಜೈಶಂಕರ್‌ ಅವರು ಈಗಾಗಲೇ ತಳ್ಳಿಹಾಕಿದ್ದಾರೆ.

ಭಾರತದೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಲು ಬಯಸುವುದಾಗಿ ಮಾಜಿ ಪ್ರಧಾನಿ ನವಾಜ್ ಷರೀಫ್, ಅವರ ಪುತ್ರಿ ಮತ್ತು ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಜ್ ಷರೀಫ್, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ನಾಯಕ ಬಿಲಾವಲ್ ಭುಟ್ಟೊ ಜರ್ದಾರಿ ಸೇರಿದಂತೆ ಪಾಕಿಸ್ತಾನದ ಆಡಳಿತಾರೂಢ ಮೈತ್ರಿಕೂಟದ ಪ್ರಮುಖ ನಾಯಕರು ಸಾರ್ವಜನಿಕ ಹೇಳಿಕೆ ನೀಡುವ ಮೂಲಕ ಭಾರತಕ್ಕೆ ಸೂಕ್ಷ್ಮ ಸಂದೇಶ ರವಾನಿಸಿದ್ದಾರೆ. ಆದರೆ, ಗಡಿಯಾಚೆಗಿನ ಭಯೋತ್ಪಾದನೆ ನಿಲ್ಲಿಸದ ಹೊರತು ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಸಲಾಗದು ಎಂಬ ತನ್ನ ನಿಲುವಿಗೆ ಭಾರತ ಅಂಟಿಕೊಂಡಿದೆ.

ಎಸ್‌ಸಿಒ ರಾಷ್ಟ್ರಗಳ ನಿಯೋಗದ ನಾಯಕರ ಗೌರವಾರ್ಥವಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಆಯೋಜಿಸಿದ್ದ ಭೋಜನಕೂಟದಲ್ಲಿ ಜೈಶಂಕರ್‌ ಅವರು ಭಾಗವಹಿಸಿದರು. ಅವರು ಬುಧವಾರ ನವದೆಹಲಿಗೆ ಹಿಂದಿರುಗುವ ಮೊದಲು ಎಸ್‌ಸಿಒ ಕೌನ್ಸಿಲ್ ಆಫ್ ಹೆಡ್ಸ್ ಆಫ್ ಗವರ್ನಮೆಂಟ್ಸ್‌ನ (ಸಿಎಚ್‌ಜಿ) 23ನೇ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಭಾಗವಹಿಸಲಿದ್ದಾರೆ.

‘ಎಸ್‌ಸಿಒ ಚೌಕಟ್ಟಿನೊಳಗೆ, ವಿವಿಧ ಕಾರ್ಯವಿಧಾನಗಳು ಮತ್ತು ಉಪಕ್ರಮಗಳನ್ನು ಒಳಗೊಂಡಂತೆ ಎಸ್‌ಸಿಒ ಸ್ವರೂಪದಲ್ಲಿ ಭಾರತವು ಸಕ್ರಿಯವಾಗಿ ತೊಡಗಿಸಿಕೊಂಡಿದೆ’ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಎಸ್‌ಸಿಒ ಸಭೆಯಲ್ಲಿ ಪಾಲ್ಗೊಳ್ಳುವಂತೆ ಶೆಹಬಾಜ್ ಷರೀಫ್ ಕೆಲವು ವಾರಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ಕಳುಹಿಸಿದ್ದರು. ಮೋದಿಯವರ ಪರವಾಗಿ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವರನ್ನು ಕಳುಹಿಸಲು ಭಾರತ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು.

ರಷ್ಯಾ ಮತ್ತು ಚೀನಾ 1996 ಮತ್ತು 2001ರ ನಡುವೆ ನ್ಯಾಟೊಗೆ ಪ್ರತಿಯಾಗಿ ಕಾರ್ಯತಂತ್ರದ ಭಾಗವಾಗಿ ಕಾರ್ಯನಿರ್ವಹಿಸಲು ಎಸ್‌ಸಿಒ ಪ್ರಾರಂಭಿಸಿದವು. ಈ ಬಣವನ್ನು ಭಾರತ ಮತ್ತು ಪಾಕಿಸ್ತಾನ 2017ರಲ್ಲಿ ಸೇರಿದವು. 2023 ಮತ್ತು 2024ರಲ್ಲಿ ಇರಾನ್ ಮತ್ತು ಬೆಲಾರೂಸ್‌ ಸೇರ್ಪಡೆಯೊಂದಿಗೆ ಎಸ್‌ಸಿಒ ಬಣವು ಪ್ರಸ್ತುತ 10 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.

2023ರ ಮೇನಲ್ಲಿ ಗೋವಾದಲ್ಲಿ ನಡೆದ ಎಸ್‌ಸಿಒ ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಬಿಲಾವಲ್ ಭಾಗವಹಿಸಿದ್ದರು. ಆಗ ಜೈಶಂಕರ್‌ ಮತ್ತು ಬಿಲಾವಲ್‌ ಅವರು ಕಾಶ್ಮೀರ ವಿಚಾರವಾಗಿ ಮಾಧ್ಯಮಗಳ ಮೂಲಕ ವಾಕ್ಸಮರ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.