ಕ್ಯಾನ್‌ಬೆರಾ: ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಆಸ್ಟ್ರೇಲಿಯಾದ ಉಪಪ್ರಧಾನಿ ಮತ್ತು ರಕ್ಷಣಾ ಸಚಿವ ರಿಚರ್ಡ್ ಮಾರ್ಲೆಸ್ ಅವರ ಜೊತೆ ಮಂಗಳವಾರ ಮಾತುಕತೆ ನಡೆಸಿದರು.
ಈ ವೇಳೆ ಜೈಶಂಕರ್ ಅವರು ಇಂಡೊ–ಪೆಸಿಫಿಕ್ ಮತ್ತು ಪ್ರಾದೇಶಿಕ ಅಭಿವೃದ್ಧಿಯ ಅಗತ್ಯತೆ ಬಗ್ಗೆ ಒತ್ತಿ ಹೇಳಿದರು.
ಐದು ದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಜೈಶಂಕರ್ ಅವರು ಆ ದೇಶದ ನಾಯಕರು, ಸಂಸದರು, ಭಾರತೀಯ ಪ್ರತಿನಿಧಿಗಳು, ಉದ್ಯಮಿಗಳು, ಪತ್ರಕರ್ತರು ಮತ್ತು ಚಿಂತಕರ ಜೊತೆ ಸಂವಾದ ನಡೆಸುತ್ತಿದ್ದಾರೆ.
‘ರಿಚರ್ಡ್ ಮಾರ್ಲೆಸ್ ಅವರ ಭೇಟಿ ಖುಷಿ ನೀಡಿದೆ. ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸಲು ರೂಪಿಸಬೇಕಾದ ಸಮಗ್ರ ಕಾರ್ಯತಂತ್ರದ ಬಗ್ಗೆ ಮಾತುಕತೆ ನಡೆಸಲಾಯಿತು’ ಎಂದು ಜೈಶಂಕರ್ ಅವರು ‘ಎಕ್ಸ್’ ಮೂಲಕ ತಿಳಿಸಿದ್ದಾರೆ.
ಇದಕ್ಕೂ ಮೊದಲು, ವಿದೇಶಾಂಗ ಸಚಿವರ 15ನೇ ಸಭೆಯಲ್ಲಿ ಆಸ್ಟ್ರೇಲಿಯಾ ವಿದೇಶಾಂಗ ಸಚಿವ ಪೆನ್ನಿ ವೋಂಗ್ ಅವರ ಜೊತೆ ಜೈಶಂಕರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.