ಅಸ್ತಾನ (ಕಜಕಸ್ತಾನ): ರಷ್ಯಾ–ಉಕ್ರೇನ್ ಯುದ್ಧದಲ್ಲಿ ರಷ್ಯಾದ ಪರ ಯುದ್ಧಮಾಡುತ್ತಿರುವ ಭಾರತೀಯರ ಸುರಕ್ಷತೆಯ ಕುರಿತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊ ಅವರೊಂದಿಗೆ ಜೈಶಂಕರ್ ಅವರು ಬುಧವಾರ ಮಾತುಕತೆ ನಡೆಸಿದರು. ಜೊತೆಗೆ, ಭಾರತೀಯರು ದೇಶಕ್ಕೆ ಸುರಕ್ಷಿತವಾಗಿ ವಾಪಸಾಗುವ ಕುರಿತೂ ಸಭೆಯಲ್ಲಿ ಪ್ರಸ್ತಾಪಿಸಿದರು.
ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಜೈಶಂಕರ್ ಅವರು ಮಂಗಳವಾರ ಅಸ್ತಾನಕ್ಕೆ ತೆರಳಿದ್ದರು. ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅವರೂ ರಷ್ಯಾ ಪ್ರವಾಸ ಕೈಗೊಳ್ಳಲಿದ್ದು, ರಷ್ಯಾ ಅಧ್ಯಕ್ಷ ವಾದ್ಲಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇದುವರೆಗೂ ಅಧಿಕೃತವಾಗಿ ಘೋಷಣೆಯಾಗಿಲ್ಲ.
ರಷ್ಯಾ ಸೇನೆಯಲ್ಲಿರುವ ಭಾರತೀಯರ ಸುರಕ್ಷತೆ ಹಾಗೂ ಸುರಕ್ಷಿತ ವಾಪಸಾತಿಯ ಕುರಿತು ರಷ್ಯಾ–ಉಕ್ರೇನ್ ಯುದ್ಧ ಆರಂಭ ಆದಾಗಿನಿಂದಲೂ ಭಾರತವು ರಷ್ಯಾದ ಮೇಲೆ ಒತ್ತಡ ಹೇರುತ್ತಲೇ ಇದೆ. ಯುದ್ಧಭೂಮಿಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟ ಬಳಿಕ, ವಿದೇಶಾಂಗ ಸಚಿವಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಜೊತೆಗೆ, ‘ರಷ್ಯಾ ಸೇನೆಗೆ ಭಾರತೀಯರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಬೇಕು’, ಇಲ್ಲವಾದಲ್ಲಿ ರಷ್ಯಾ–ಭಾರತದ ಸಂಬಂಧಕ್ಕೆ ಧಕ್ಕೆ ಆಗಬಹುದು ಎಂದೂ ಭಾರತ ಹೇಳಿತ್ತು.
ಅಂಕಿ–ಅಂಶ
200 – ರಷ್ಯಾ ಸೇನೆಯಲ್ಲಿ ಭದ್ರತಾ ಸಹಾಯಕರಾಗಿ ಕೆಲಸ ಮಾಡುತ್ತಿರುವ ಭಾರತೀಯರ ಸಂಖ್ಯೆ
4 – ಜೂನ್ ಮಧ್ಯಭಾಗದಲ್ಲಿ ರಷ್ಯಾ–ಉಕ್ರೇನ್ ಯುದ್ಧದಲ್ಲಿ ಹುತಾತ್ಮರಾದ ಭಾರತೀಯರ ಸಂಖ್ಯೆ
10 – ರಷ್ಯಾ ಸೇನೆಯಲ್ಲಿ ಸಹಾಯಕರಾಗಿ ಇದ್ದು, ದೇಶಕ್ಕೆ ಮರಳಿದ ಭಾರತೀಯರ ಸಂಖ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.