ಪರ್ತ್: ‘ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವವು ಭಾರತಕ್ಕೆ ಖಂಡಿತವಾಗಿಯೂ ಸಿಗಲಿದೆ. ಆದರೆ ಬಹಳಷ್ಟು ರಾಷ್ಟ್ರಗಳು ಅದಕ್ಕೆ ಅಡ್ಡಗಾಲು ಹಾಕುತ್ತಿರುವುದರಿಂದ ಸುಲಭದ ಮಾರ್ಗವಲ್ಲ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಹಿಂದೂ ಮಹಾಸಾಗರ ಸಮ್ಮೇಳನದಲ್ಲಿ ಪಾಲ್ಗೊಂಡು ಶನಿವಾರ ಮಾತನಾಡಿದ ಅವರು ಭಾರತೀಯ ಸಮುದಾಯದೊಂದಿಗೆ ಮಾತನಾಡಿದರು.
‘ಜಗತ್ತಿನ ಹಲವು ರಾಷ್ಟ್ರಗಳನ್ನು ಸುತ್ತಾಡಿದ ನಂತರ ಭಾರತವನ್ನು ಅವರು ನೋಡುತ್ತಿರುವ ದೃಷ್ಟಿಕೋನ ಬದಲಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಹೀಗಾಗಿ ನಮಗೆ ಖಾಯಂ ಸದಸ್ಯತ್ವ ಸಿಕ್ಕೇ ಸಿಗುತ್ತದೆ ಎಂಬುದು ಶೇ 100ರಷ್ಟು ಖಚಿತವಾಗಿದೆ. ಆದರೆ ಇಡೀ ಜಗತ್ತೇ ಸ್ಪರ್ಧೆಯಲ್ಲಿದೆ’ ಎಂದಿದ್ದಾರೆ.
‘ಕೆಲವರು ನಮ್ಮ ದಾರಿಯನ್ನು ಮುಚ್ಚಲು ಯತ್ನಿಸುತ್ತಿದ್ದಾರೆ. ಹೀಗಾಗಿ ಈ ಹಾದಿಯಲ್ಲಿ ಮುಂದೆ ಸಾಗುವುದು ಕಠಿಣವಾಗಿದೆ. ಆದರೆ ಆ ತಡೆ ತೆರವು ಪ್ರಕ್ರಿಯೆ ಪ್ರಗತಿಯಲ್ಲಿದೆ. 5 ಅಥವಾ 10 ವರ್ಷಗಳ ಹಿಂದಿನ ದಿನಗಳಿಗೆ ಹೋಲಿಸಿದಲ್ಲಿ ಈಗ ಅದು ಸಿಗುತ್ತದೆ ಎಂಬ ನಂಬಿಕೆ ನನಗಿದೆ’ ಎಂದು ಯಾವುದೇ ರಾಷ್ಟ್ರದ ಹೆಸರನ್ನೂ ಹೇಳದೆ ಅನಿಸಿಕೆ ಹಂಚಿಕೊಂಡರು.
‘ಜಗತ್ತಿನ ವಿಶ್ವಾಸ ಹಾಗೂ ನಂಬಿಕೆ ಗಳಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಈ 25 ವರ್ಷಗಳು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಇದು ಭಾರತದ ಭವಿಷ್ಯದ ದಿಕ್ಕನ್ನೇ ಬದಲಿಸುವುದರ ಜತೆಗೆ, ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಿದೆ’ ಎಂದು ಜೈಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.
ಭದ್ರತಾ ಮಂಡಳಿ ಕುರಿತು ಕಳೆದ ಡಿಸೆಂಬರ್‌ನಲ್ಲಿ ಮಾತನಾಡಿದ್ದ ಜೈಶಂಕರ್, ‘ಭದ್ರತಾ ಮಂಡಳಿ ಎಂಬುದು ಒಂದು ಹಳೆಯ ಕ್ಲಬ್‌ನಂತಾಗಿದೆ. ಅದೇ ಒಂದು ಗುಂಪಿನ ಸದಸ್ಯರು ಇದ್ದಾರೆ. ಮಂಡಳಿ ಮೇಲಿರುವ ತಮ್ಮ ಹಿಡತ ಕೈಜಾರದಂತೆ ನೋಡಿಕೊಳ್ಳುತ್ತಿದ್ದಾರೆ. ಅವರು ಅನುಸರಿಸುತ್ತಿರುವ ಪದ್ಧತಿ ಕುರಿತು ಯಾರೂ ಪ್ರಶ್ನಿಸದಂತೆ ನೋಡಿಕೊಳ್ಳುತ್ತಿದ್ದಾರೆ’ ಎಂದಿದ್ದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸದ್ಯ ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಹಾಗೂ ಅಮೆರಿಕ ಇವೆ. ಖಾಯಂ ಸದಸ್ಯರಿಗೆ ಮಾತ್ರ ಪ್ರಮುಖ ನಿರ್ಣಯ ತೆಗೆದುಕೊಳ್ಳುವ ವಿಟೊ ಅಧಿಕಾರವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.