ವಾಷಿಂಗ್ಟನ್: ಅಮೆರಿಕದ ಮಾಧ್ಯಮಗಳು ಭಾರತದ ಬಗ್ಗೆ ತಾರತಮ್ಯದಿಂದ ಕೂಡಿದ ವರದಿಗಳನ್ನು ಪ್ರಕಟಿಸುತ್ತಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಹೆಸರು ಹೇಳದೆಯೇ ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾರತೀಯ–ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇಲ್ಲಿನ ಮಾಧ್ಯಮಗಳನ್ನು ಗಮನಿಸಿದೆ. ಈ ನಗರದಿಂದ ಪ್ರಕಟವಾಗುವ ಪತ್ರಿಕೆಯೊಂದು ಸೇರಿದಂತೆ ಇಲ್ಲಿನ ಮಾಧ್ಯಮಗಳು ಏನು ಪ್ರಕಟಿಸುತ್ತಿವೆ ಎಂಬುದು ನಿಜವಾಗಿಯೂ ನಿಮಗೆ ಗೊತ್ತಿದೆಯೇ’ ಎಂದು ಪ್ರಶ್ನಿಸಿದ್ದಾರೆ.
ಜೆಫ್ ಬೆಜೋಸ್ ಮಾಲೀಕತ್ವದ ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯು ವಾಷಿಂಗ್ಟನ್ ಡಿಸಿಯಿಂದ ಪ್ರಕಟವಾಗುತ್ತಿದೆ.
‘ಮಾಧ್ಯಮಗಳ ವರದಿಗಳು ಪಕ್ಷಪಾತದಿಂದ ಕೂಡಿವೆ ಎಂಬುದು ನನ್ನ ಅಭಿಪ್ರಾಯವಾಗಿದೆ. ಭಾರತದಲ್ಲಿ ನಿಜವಾಗಿಯೂ ಪ್ರಯತ್ನಗಳಾಗುತ್ತಿವೆ... ನೋಡಿ, ಭಾರತವು ತನ್ನ ದಾರಿಯಲ್ಲೇ ಸಾಗುತ್ತಿದೆ. ತಾವೇ ಭಾರತದ ರಕ್ಷಕರು ಮತ್ತು ಭಾರತವನ್ನು ರೂಪಿಸುವವರು ಎಂದು ಭಾವಿಸಿರುವವರು ಅಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಹೀಗೆ ಚರ್ಚೆ ಮಾಡುವ ಕೆಲವರ ಬಣ್ಣ ಬಯಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ. ಭಾರತ ವಿರೋಧಿ ಶಕ್ತಿಗಳು ಇಲ್ಲಿ ಹೆಚ್ಚಾಗುತ್ತಿವೆಯಲ್ಲಾ ಎಂದು ಕೇಳಲಾದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.
ಅಂಥ ಶಕ್ತಿಗಳು ಹೊರಗಡೆಯಿಂದ ಭಾರತವನ್ನು ಗೆಲ್ಲಲು ಮತ್ತು ಹೊರಗಿದ್ದುಕೊಂಡೇ ಭಾರತಕ್ಕೆ ಒಂದು ರೂಪ ನೀಡಬೇಕು ಎಂದು ಪ್ರಯತ್ನಿಸುತ್ತಿವೆ. ಆದರೆ ಅವುಗಳು ಭಾರತದಲ್ಲಿ ಗೆಲ್ಲುವುದಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ.
‘ಇದು ನಾವು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯ. ಸ್ಪರ್ಧಿಸುವುದು ಮುಖ್ಯ. ಯಾಕೆಂದರೆ ಹೆಚ್ಚಿನ ಅಮೆರಿಕನ್ನರು ಸೂಕ್ಷ್ಮಗಳನ್ನು ಮತ್ತು ಸ್ವದೇಶಕ್ಕೆ ಮರಳುವ ಸಂಕೀರ್ಣತೆಗಳನ್ನು ಅರಿತಿರುವುದಿಲ್ಲ. ಇತರರು ನಮ್ಮನ್ನು ವ್ಯಾಖ್ಯಾನಿಸಲು ಬಿಡಬಾರದು. ಹೀಗಾಗಿ ಇದು ಒಂದು ಸಮುದಾಯವಾಗಿ ನನಗೆ ಬಹು ಮುಖ್ಯವಾದ ವಿಷಯವಾಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.