ಟೋಕಿಯೊ: ಜಪಾನ್‌ನ ದೀರ್ಘಾವದಿಯ ಪ್ರಧಾನಿಯಾಗಿದ್ದ ಶಿಂಜೊ ಅಬೆ ಅವರಿಗೆ ಗುಂಡೇಟು ಬಿದ್ದಿದೆ ಎಂದು ಸರ್ಕಾರದ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ. ಆದರೆ, ಅವರು ಜೀವಂತವಿರುವ ಬಗ್ಗೆ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಭಾನುವಾರ ಜಪಾನ್‌ನಲ್ಲಿ ಮೇಲ್ಮನೆ ಚುನಾವಣೆ ನಡೆಯಲಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮ ಜಪಾನ್‌ನ ನಾರಾ ನಗರದಲ್ಲಿ ಆಯೋಜನೆಯಾಗಿದ್ದ ಸಮಾರಂಭದಲ್ಲಿ ಅಬೆ ಭಾಷಣ ಮಾಡುತ್ತಿದ್ದರು. ಆಗ ಗುಂಡಿನ ಸದ್ದು ಕೇಳಿಬಂದಿದೆ ಎಂದು ಸುದ್ದಿಸಂಸ್ಥೆಗಳಾದ ಎನ್‌ಎಚ್‌ಕೆ ಮತ್ತು ಕ್ಯೋಡೊ ಸುದ್ದಿ ಪ್ರಕಟಿಸಿವೆ.
‘ಭಾಷಣ ಮಾಡುವಾಗ ಅವರ ಹಿಂದಿನಿಂದ ಬಂದ ವ್ಯಕ್ತಿ ಗುಂಡು ಹಾರಿಸಿದ್ದಾನೆ. ಎದೆಯ ಮೇಲೆ ಕೈಹಿಡಿದು ಅಬೆ ಕುಸಿದು ಬಿದ್ದಿದ್ದಾರೆ. ಅಬೆ ಅವರನ್ನು ಸುತ್ತುವರಿದ ಜನ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆ ಸಿಬ್ಬಂದಿ ಹೆಚ್ಚಿನ ಮಾಹಿತಿ ನೀಡಿಲ್ಲ‘ ಎಂದು ವರದಿಯಲ್ಲಿದೆ.
‘ಮಾಜಿ ಪ್ರಧಾನಿ ಅಬೆ ಅವರಿಗೆ ಬೆಳಿಗ್ಗೆ 11:30 ರ ಸುಮಾರಿಗೆ ಗುಂಡೇಟು ಬಿದ್ದಿದೆ‘ ಎಂದು ನಾರಾದಲ್ಲಿ ಕ್ಯಾಬಿನೆಟ್‌ನ ಮುಖ್ಯ ಕಾರ್ಯದರ್ಶಿ ಹಿರೋಕಾಜು ಮಾಟ್ಸುನೊ ಸುದ್ದಿಗಾರರಿಗೆ ತಿಳಿಸಿದರು.
‘ಕೃತ್ಯವೆಸಗಿದ್ದಾನೆ ಎಂದು ನಂಬಲಾದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಜಿ ಪ್ರಧಾನಿ ಅಬೆ ಅವರ ಸದ್ಯದ ಸ್ಥಿತಿಯ ಬಗ್ಗೆ ಮಾಹಿತಿ ಇಲ್ಲ’ ಎಂದು ಮಾಟ್ಸುನೊ ಹೇಳಿದ್ದಾರೆ.
ಬಂಧಿತನನ್ನು ನಾರಾ ನಗರ ನಿವಾಸಿಯಮಾಗಮಿ ಟೆಟ್ಸುಯ ಎಂದು ಗುರುತಿಸಲಾಗಿದೆ.
ಅತಿ ದೀರ್ಘ ಅವಧಿಗೆ ಜಪಾನ್‌ನ ಪ್ರಧಾನಿಯಾಗಿದ್ದ ಶಿಂಜೊ ಅಬೆ ಅವರು ಆರೋಗ್ಯ ಸಮಸ್ಯೆಯ ಕಾರಣಕ್ಕೆ 2020ರ ಸೆಪ‍್ಟೆಂಬರ್‌ನಲ್ಲಿಹುದ್ದೆಯನ್ನು ತೊರೆದಿದ್ದಾರೆ. 2012ರಲ್ಲಿ ಅಬೆ ಅವರು ಅಧಿಕಾರಕ್ಕೆ ಬರುವುದಕ್ಕೆ ಮುಂಚಿನ ಐದು ವರ್ಷಗಳಲ್ಲಿ ಪ್ರಧಾನಿ ಹುದ್ದೆಯನ್ನು ಐದು ಮಂದಿ ನಿಭಾಯಿಸಿದ್ದರು. ಜಪಾನ್‌ಗೆ ರಾಜಕೀಯ ಸ್ಥಿರತೆಯನ್ನು ತಂದುಕೊಟ್ಟವರು ಅಬೆ.
ಅಬೆ ಅವರಿಗೆ ‘ಹೃದಯಸ್ತಂಭನ’ವಾಗಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಜಪಾನ್‌ನಲ್ಲಿ ಸಾಮಾನ್ಯವಾಗಿ ಗಣ್ಯರ ಸಾವಿನ ಸುದ್ದಿಯನ್ನು ಅಧಿಕೃತವಾಗಿ ಬಿತ್ತರಿಸುವುದಕ್ಕೂ ಮೊದಲು ಈ ಪದವನ್ನು ಪ್ರಯೋಗಿಸಲಾಗುತ್ತದೆ. ಹೀಗಾಗಿ ಅಬೆ ಅವರ ಸಾವಾಗಿರುವ ಆತಂಕ ಜಪಾನ್‌ನಲ್ಲಿ ಮನೆ ಮಾಡಿದೆ.
ಹಿಂಸಾತ್ಮಕ ಅಪರಾಧ ನಿಯಂತ್ರಣ ಮತ್ತು ಕಠಿಣ ಶಸ್ತ್ರಾಸ್ತ್ರ ಕಾನೂನುಗಳನ್ನು ಹೊಂದಿರುವ ಜಪಾನ್‌ನಲ್ಲಿ ನಡೆದಿರುವ ಈ ಘಟನೆ ಆತಂಕವನ್ನುಂಟು ಮಾಡಿದೆ.
ಇವುಗಳನ್ನು ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.