ADVERTISEMENT

ಜಪಾನ್‌ನಲ್ಲಿ ಹೊಸ ವರ್ಷದ ಮೊದಲ ದಿನವೇ ಸರಣಿ ಭೂಕಂಪ; ಸುನಾಮಿ ಭೀತಿ

ಬಿರುಕುಬಿಟ್ಟ ರಸ್ತೆಗಳು, ಕುಸಿದ ಕಟ್ಟಡ; ಸುರಕ್ಷಿತ ಸ್ಥಳಗಳಿಗೆ ತೆರಳಲು ಜನತೆಗೆ ಸಲಹೆ

ಏಜೆನ್ಸೀಸ್
Published 1 ಜನವರಿ 2024, 16:19 IST
Last Updated 1 ಜನವರಿ 2024, 16:19 IST
ಸೋಮವಾರ ಸರಣಿ ಭೂಕಂಪನದಿಂದಾಗಿ ಜಪಾನ್‌ನ ಇಶಿಕಾವಾದ ವಾಜಿಮಾದಲ್ಲಿ ರಸ್ತೆ, ಭೂ ಪ್ರದೇಶ ಬಿರುಕು ಬಿಟ್ಟಿರುವುದು –ಎಪಿ ಚಿತ್ರ
ಸೋಮವಾರ ಸರಣಿ ಭೂಕಂಪನದಿಂದಾಗಿ ಜಪಾನ್‌ನ ಇಶಿಕಾವಾದ ವಾಜಿಮಾದಲ್ಲಿ ರಸ್ತೆ, ಭೂ ಪ್ರದೇಶ ಬಿರುಕು ಬಿಟ್ಟಿರುವುದು –ಎಪಿ ಚಿತ್ರ   

ಟೊಕಿಯೊ: ಹೊಸ ವರ್ಷದ ಮೊದಲ ದಿನ ಜಪಾನ್‌ನ ಪಶ್ಚಿಮ ಭಾಗದ ಕರಾವಳಿಯಲ್ಲಿ ಸರಣಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ಒಂದು ಬಾರಿ ರಿಕ್ಟರ್‌ ಮಾಪನದಲ್ಲಿ 7.6ರಷ್ಟು ದಾಖಲಾಗಿದೆ. ಸಾವು ನೋವಿನ ವಿವರ ಸದ್ಯಕ್ಕೆ ತಿಳಿದುಬಂದಿಲ್ಲ.

ಇಶಿಕಾವಾ ಹಾಗೂ ಹೊನ್ಶು ದ್ವೀಪ ಪ್ರದೇಶ ವ್ಯಾಪ್ತಿಗೆ ಅನ್ವಯಿಸಿ ಆರಂಭದಲ್ಲಿ ಸುನಾಮಿಯ ಗಂಭೀರ ಎಚ್ಚರಿಕೆ ನೀಡಿದ್ದ ಜಪಾನ್ ಆಡಳಿತ, ಬಳಿಕ ಹಿಂಪಡೆಯಿತು. ಬೃಹತ್ ಅಲೆ ಅಪ್ಪಳಿಸುವ ಸಾಧ್ಯತೆ ಇದ್ದು, ಕರಾವಳಿ ಭಾಗದಲ್ಲಿರುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದೆ.

ಭೂಕಂಪದಿಂದ ಕೆಲವೆಡೆ ಕಟ್ಟಡಗಳು ಕುಸಿದಿವೆ. ಅದರಡಿ ಜನರು ಸಿಲುಕಿರುವ ಮಾಹಿತಿ ಇಲ್ಲ. ಒಂದೆರಡು ಕಡೆ ಬೆಂಕಿ ಹೊತ್ತಿಕೊಂಡಿದೆ. ಕುಸಿದ ಕಟ್ಟಡಗಳಲ್ಲಿ ಜನರು ಸಿಲುಕಿದ್ದಾರೆಯೇ ಎಂಬುದು ಖಚಿತವಾಗಿಲ್ಲ ಎಂದು ವರದಿಗಳು ತಿಳಿಸಿವೆ.

ADVERTISEMENT

ಕರಾವಳಿ ಭಾಗದಲ್ಲಿ ಜನರು ಸುರಕ್ಷಿತ ಸ್ಥಳದತ್ತ ಧಾವಿಸಬೇಕು ಎಂದು ಜಪಾನ್‌ನ ಹವಾಮಾನ ಮುನ್ಸೂಚನೆ ಸಂಸ್ಥೆ ಸಲಹೆ ನೀಡಿದೆ. ರಸ್ತೆಗಳಲ್ಲಿ ಬಿರುಕು ಉಂಟಾಗಿದೆ. ಮುಂದಿನ ಒಂದು ವಾರದ ಮತ್ತೆ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯನ್ನು ನೀಡಿದೆ.

ಸರಣಿ ಭೂಕಂಪನದ ಪರಿಣಾಮ ಜಪಾನ್‌ನ ಕಾನಾಜವಾದಲ್ಲಿ ಟೊರ್ಲಿ ಗೇಟ್‌ ಹಾನಿಗೊಂಡಿರುವುದು –ಎ.ಪಿ ಚಿತ್ರ

ಸರ್ಕಾರದ ವಕ್ತಾರ ಯೊಶಿಮಸಾ ಹಯಾಶಿ ಅವರು, ‘ಈ ವಲಯದಲ್ಲಿರುವ ಅಣುಶಕ್ತಿ ಸ್ಥಾವರಗಳಿಗೆ ಏನು ಧಕ್ಕೆಯಾಗಿಲ್ಲ‘ ಎಂದಿದ್ದಾರೆ. ಪ್ರತಿ  ನಿಮಿಷವು ಮುಖ್ಯ. ಶೀಘ್ರ ಸುರಕ್ಷಿತ ಸ್ಥಳಗಳತ್ತ ತೆರಳಬೇಕು‘ ಎಂದು ಕರಾವಳಿ ತೀರದ ನಿವಾಸಿಗಳಿಗೆ ಸಲಹೆ ಮಾಡಿದರು.

ಪಶ್ಚಿಮ ಕರಾವಳಿಯ ನೀಗಾಟಾ ಮತ್ತು ಇತರೆ ಪ್ರದೇಶಗಳಿಗೆ ಸುಮಾರು 10 ಅಡಿ ಎತ್ತರದ ಅಲೆ ಅಪ್ಪಳಿಸಬಹುದು ಎಂದು ಎನ್‌ಎಚ್‌ಕೆ ವರದಿ ಮಾಡಿದೆ. ಇಶಿಕಾವಾ ವಲಯದ ವಾಜಿಮಾ ನಗರದಲ್ಲಿ ಹೊಗೆ ಮೂಡಿದ್ದ ದೃಶ್ಯಗಳನ್ನು ವರದಿ ಮಾಡಿದೆ.

ಮನೆಯೊಂದು ಕುಸಿದಿದ್ದು, ಅದರಡಿ ಜನರು ಸಿಲುಕಿದ್ದಾರೆ ಎಂದು ತಪಾಸಣೆ ನಡೆಸಿದೆ. ಮುಂಜಾಗ್ರತೆಯಾಗಿ ಬುಲೆಟ್‌ ಟ್ರೈನ್‌ಗಳ ಸಂಚಾರ ನಿಲ್ಲಿಸಲಾಗಿದೆ. ಹೆದ್ದಾರಿಗಳಲ್ಲೂ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಕೆಲವೆಡೆ ನೀರು ಪೂರೈಕೆ ಕೊಳವೆಗಳು ಸಿಡಿದಿವೆ.

ಜಪಾನ್‌ ಸಾಮಾನ್ಯವಾಗಿ ಹೆಚ್ಚು ಭೂಕಂಪನ ಬಾಧಿತ ವಲಯವಾಗಿದೆ. 2011ರ ಮಾರ್ಚ್‌ ತಿಂಗಳಲ್ಲಿ ಭಾರಿ ಭೂಕಂಪನ ಮತ್ತು ಸುನಾಮಿ ಸಂಭವಿಸಿತ್ತು. ಅಣುಶಕ್ತಿ ಸ್ಥಾವರದ ಅಸ್ತಿತ್ವಕ್ಕೂ ಧಕ್ಕೆಯಾಗಿತ್ತು.

ಭೂಕಂಪನದ ಕೇಂದ್ರ ಬಿಂದು ಎಂದು ಗುರುತಿಸಲಾದ ಸ್ಥಳದ ಸಮೀಪವಿರುವ ಪ್ರಮುಖ ಹೆದ್ದಾರಿಗಳನ್ನು ಬಂದ್‌ ಮಾಡಿದ್ದು, ಜಪಾನ್‌ಗೆ ಹೊಂದಿಕೊಂಡಂತೆ ಇರುವ ರಷ್ಯಾದ ವ್ಲಾಡಿವೊಸ್ಟೊಕ್ ನಗರದ ‘ಸಖಲಿನ್‌‘ ದ್ವೀಪ ಪ್ರದೇಶದಲ್ಲೂ ರಷ್ಯಾ ಎಚ್ಚರಿಕೆ ಸಂದೇಶ ವಾನಿಸಿದೆ. ತುರ್ತು ನೆರವು ಸೇವೆಗಳಿಗೆ ಸನ್ನದ್ಧರಾಗಿರಲು ಸೂಚನೆ ನೀಡಿದೆ ಎಂದು ಮಾಸ್ಕೊದಿಂದ ಎಎಫ್‌ಪಿ ವರದಿ ಮಾಡಿದೆ.

ಸರಣಿ ಭೂಕಂಪನದ ಹಿಂದೆಯೇ ಆತಂಕಗೊಂಡ ಜನರು ಜಪಾನ್‌ನ ವಾಜಿಮಾದಲ್ಲಿ ಕಟ್ಟಡದಿಂದ ಹೊರಬಂದು ಬಯಲಲ್ಲಿ ನೆಲೆಸಿರುವುದು –ಎಎಫ್‌ಪಿ ಚಿತ್ರ

ಮುಖ್ಯಾಂಶಗಳು..

* ಇಶಿಕಾವಾ ಪ್ರದೇಶ ಭೂಕಂಪನದ ಕೇಂದ್ರ ಬಿಂದು. ಒಂದು ಬಾರಿ ಭೂಕಂಪನದ ತೀವ್ರತೆ 7.6 ದಾಖಲು

* 16.5 ಅಡಿ ಎತ್ತರಕ್ಕೆ ಅಲೆ ಚಿಮ್ಮುವ ಎಚ್ಚರಿಕೆ, ಸುರಕ್ಷಿತ ಸ್ಥಳಗಳಿಗೆ ತೆರಳಲು ಕರಾವಳಿ ತೀರದವರಿಗೆ ಸಲಹೆ

* ಮುಂಜಾಗ್ರತೆಯಾಗಿ ಬುಲೆಟ್‌ ರೈಲು ಸಂಚಾರ ರದ್ದು, ಹೆಚ್ಚಾರಿಗಳಲ್ಲಿ ಸಂಚಾರ ಬಂದ್

* ಟೊಯಾಮಾ, ಇಶಿಕಾವಾ, ನಿಗಾಟಾದಲ್ಲಿ 33,500ಕ್ಕೂ ಹೆಚ್ಚು ಮನೆಗಳಲ್ಲಿ ವಿದ್ಯುತ್‌ ಸಂಪರ್ಕಕಡಿತ 

ಸಹಾಯವಾಣಿ ಸ್ಥಾಪಿಸಿದ ಭಾರತದ ರಾಯಭಾರ ಕಚೇರಿ

ಟೊಕಿಯೊ (ಪಿಟಿಐ): ಜಪಾನ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಯು ಯಾವುದೇ ಸಹಾಯ ಬಯಸುವ ಭಾರತೀಯರಿಗೆ ನೆರವಾಗಲು ತುರ್ತು ಸಹಾಯವಾಣಿ ಸ್ಥಾಪಿಸಿದೆ.

ಜಪಾನ್‌ ಆಡಳಿತವು ಸುನಾಮಿ ಎಚ್ಚರಿಕೆ ನೀಡಿದ ಹಿಂದೆಯೇ ಈ ಕ್ರಮಕೈಗೊಳ್ಳಲಾಗಿದೆ. ರಾಯಭಾರಿ ಕಚೇರಿಯು ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದೆ. ಜನರು ಸ್ಥಳೀಯ ಆಡಳಿತ ನೀಡುವ ಸೂಚನೆಗಳನ್ನು ಪಾಲಿಸಬೇಕು. ತುರ್ತು ನೆರವು ಅಗತ್ಯವಿದ್ದರೆ ಸಹಾಯವಾಣಿ ಸಂಪರ್ಕಿಸಬೇಕು ಎಂದು ರಾಯಭಾರ ಕಚೇರಿಯು ಹೇಳಿಕೆ ನೀಡಿದೆ.

ಜಪಾನ್‌ನ ವಾಜಿಮಾದಲ್ಲಿ ಭೂಕಂಪನದ ಹಿಂದೆಯೇ ರಸ್ತೆ ಬಿರುಕುಬಿಟ್ಟಿದ್ದು ಭೂಕುಸಿತವಾಗಿರುವುದು –ಎಎಫ್‌ಪಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.