ADVERTISEMENT

ಶಿಂಜೊ ಅಬೆ ಹತ್ಯೆ: ಮಾತುಗಳೇ ಬರದಂತಾಗಿದೆ ಎಂದ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 12:18 IST
Last Updated 8 ಜುಲೈ 2022, 12:18 IST
ಶಿಂಜೊ ಅಬೆ ಹಾಗೂ ಫುಮಿಯೊ ಕಿಷಿಡ
ಶಿಂಜೊ ಅಬೆ ಹಾಗೂ ಫುಮಿಯೊ ಕಿಷಿಡ   

ಟೋಕಿಯೊ: ಮಾಜಿ ಪ್ರಧಾನಿ ಶಿಂಜೊ ಅಬೆ ನಿಧನದ ಸುದ್ದಿ ಕೇಳಿ ಮಾತುಗಳೇ ಬರದಂತಾಗಿದೆ. ಇದನ್ನು ಜಪಾನ್‌ ಪ್ರಜಾಪ್ರಭುತ್ವ ಎಂದಿಗೂ ಕ್ಷಮಿಸುವುದಿಲ್ಲ ಎಂದು ಜಪಾನ್‌ ಪ್ರಧಾನಿ ಫುಮಿಯೊ ಕಿಶಿದಾ ಹೇಳಿದ್ದಾರೆ.

ಅಬೆ ಅವರ ನಿಧನದ ಕುರಿತುಮಾಧ್ಯಮದವರೊಂದಿಗೆ ಮಾತನಾಡಿರುವಕಿಶಿದಾ, ನಾನು ಅವರ (ಶಿಂಜೊ) ಉಳಿವಿಗಾಗಿ ಪ್ರಾರ್ಥಿಸಿದ್ದೆ. ಆದರೆ ಅದರ ಬದಲು ಸಾವಿನ ಸುದ್ದಿ ಕೇಳಿದ್ದೇನೆ ಎಂದು ದುಖಃ ವ್ಯಕ್ತಪಡಿಸಿದ್ದಾರೆ.

'ನಿಜವಾಗಿಯೂಇದು ವಿಷಾದನೀಯ. ಮಾತುಗಳೇ ಬರುತ್ತಿಲ್ಲ. ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ ಮತ್ತು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ತಿಳಿಸಿದ್ದಾರೆ.‌

ADVERTISEMENT

ಅತ್ಯಂತ ದೀರ್ಘಾವಧಿಗೆ (8 ವರ್ಷ, 8 ತಿಂಗಳು) ಜಪಾನ್‌ ಪ್ರಧಾನಿಯಾಗಿದ್ದ ಅಬೆ, ಅನಾರೋಗ್ಯದ ಕಾರಣದಿಂದ 2020ರಲ್ಲಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು.

ಜಪಾನ್‌ನ ಮೇಲ್ಮನೆಗೆ ಭಾನುವಾರ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾರಾ ಪ್ರದೇಶದಲ್ಲಿ ನಡೆದ ಸಮಾವೇಶದಲ್ಲಿ ಅಬೆ ಭಾಗವಹಿಸಿದ್ದರು. ಈ ವೇಳೆ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು.

'ಈ ಚುನಾವಣೆ ಸಂದರ್ಭದಲ್ಲಿ ನಡೆದ ಹೇಯ ಮತ್ತು ಭೀಕರ ಕೃತ್ಯವು ಮಾಜಿ ಪ್ರಧಾನಿ ಅಬೆ ಅವರ ಜೀವವನ್ನು ತೆಗೆದಿದೆ. ಇದು ಕ್ಷಮಿಸಲಸಾಧ್ಯವಾದ ಕೃತ್ಯ. ಕಠಿಣ ಕ್ರಮಗಳ ಮೂಲಕ ನಾವು ಈ ಕೃತ್ಯವನ್ನು ಮತ್ತೊಮ್ಮೆ ಬಲವಾಗಿ ಖಂಡಿಸುತ್ತೇವೆ' ಎಂದುಕಿಶಿದಾ ಒತ್ತಿಹೇಳಿದ್ದಾರೆ.

ಅಬೆ ಪ್ರಧಾನಿಯಾಗಿ ಎಂಟು ವರ್ಷ, ಎಂಟು ತಿಂಗಳು ದೀರ್ಘ ಅವಧಿಗೆ ದೊಡ್ಡ ಜವಾಬ್ದಾರಿನಿಭಾಯಿಸಿದ್ದಾರೆ.ಆಂತರಿಕ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಕಠಿಣ ಸಂದರ್ಭಗಳಲ್ಲಿ ತಮ್ಮ ಅದ್ಭುತವಾದ ನಾಯಕತ್ವ ಮತ್ತು ಆಡಳಿತಾತ್ಮಕ ಸಾಮರ್ಥ್ಯದಿಂದ ದೇಶವನ್ನು ಮುನ್ನಡೆಸಿದ್ದಾರೆ ಎಂದುಕಿಶಿದಾ ಶ್ಲಾಘಿಸಿದ್ದಾರೆ.

ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಚುನಾವಣೆ ಪ್ರಕ್ರಿಯೆ ಮುಂದುವರಿಯಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.