ಟೋಕಿಯೊ:ಮಾಜಿ ಪ್ರಧಾನಿ, ಪ್ರಭಾವಿ ಜನನಾಯಕ ಶಿಂಜೊಅಬೆ ಅವರ ಹತ್ಯೆಯಿಂದ ಜಪಾನ್‌ನಲ್ಲಿ ಕವಿದಿರುವ ಶೋಕದ ಛಾಯೆಯ ನಡುವೆಯೇ ದೇಶದ ಸಂಸತ್‌ನ ಮೇಲ್ಮನೆಯ ಪ್ರಮುಖ ಚುನಾವಣೆಯ ಮತದಾನ ಭಾನುವಾರ ನಡೆಯಿತು.
ಯುದ್ಧಾನಂತರದ ಜಪಾನ್‌ನಲ್ಲಿ ಹತ್ಯೆಗೀಡಾದ ಮೊದಲ ಜನನಾಯಕ ಶಿಂಜೊ ಅಬೆ. ಸಂಸತ್ ಚುನಾವಣೆಗೆ ತಮ್ಮ ಪಕ್ಷದ ಪರ ಪ್ರಚಾರ ಭಾಷಣ ಮಾಡುತ್ತಿದ್ದಾಗಲೇ ಹಂತಕನ ಗುಂಡೇಟಿಗೆ ಬಲಿಯಾಗಿದ್ದರು.ಅಬೆ ಅವರ ಹತ್ಯೆಯ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಜಪಾನಿಗರಲ್ಲಿ ದುಃಖ ಮತ್ತು ಆತಂಕ ಇನ್ನೂ ಮಡುಗಟ್ಟಿಯೇ ಇದೆ.
ದುರ್ಬಲ ವಿರೋಧ ಪಕ್ಷದ ಎದುರು ಆಡಳಿತ ನಡೆಸುತ್ತಿರುವ ಲಿಬರಲ್ ಡೆಮಾಕ್ರಟಿಕ್ ಪಕ್ಷಕ್ಕೆ ಪ್ರಮುಖ ವಿಜಯ ಲಭಿಸಲಿದೆ ಎಂದು ಮಾಧ್ಯಮಗಳ ಸಮೀಕ್ಷೆಗಳು ಅಂದಾಜಿಸಿದ್ದರೂ ಅಬೆ ಅವರ ಹತ್ಯೆಯಿಂದ ದೇಶದಲ್ಲಿ ಉಂಟಾಗಿರುವ ಅನುಕಂಪದ ಅಲೆಯಿಂದ, ಪ್ರಧಾನಿ ಫುಮಿಯೊ ಕಿಶಿಡಾ ಅವರಿಗೆ ಸಂಸತ್‌ನಲ್ಲಿ ಬೇಕಿದ್ದ ಸರಳ ಬಹುಮತದ ಗುರಿಗಿಂತಲೂ ಬಹುದೊಡ್ಡ ವಿಜಯವೇ ಲಭಿಸುವ ನಿರೀಕ್ಷೆ ಇದೆ.
ಮತದಾರರು ಇತ್ತ ತಮ್ಮ ಮತದಾನದ ಹಕ್ಕು ಚಲಾಯಿಸುವಲ್ಲಿ ನಿರತರಾಗಿದ್ದರೆ, ಅತ್ತ, ಪಶ್ಚಿಮ ಜಪಾನ್ ಪೊಲೀಸರು ಅಬೆ ಹಂತಕನನ್ನು ವಿಚಾರಣೆಗಾಗಿ ಸ್ಥಳೀಯ ಪ್ರಾಸಿಕ್ಯೂಟರ್ ಕಚೇರಿಗೆ ಬಿಗಿಭದ್ರತೆಯಲ್ಲಿ ಕರೆದೊಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.