ADVERTISEMENT

ಬಾಂಗ್ಲಾದ ಪ್ರವಾಹ ಪರಿಸ್ಥಿತಿಗೆ ಭಾರತ ಕಾರಣವಲ್ಲ: ಗುಲಾಮ್‌ ಮೊಹಮ್ಮದ್‌ ಖಾದರ್‌

ಪಿಟಿಐ
Published 26 ಆಗಸ್ಟ್ 2024, 13:10 IST
Last Updated 26 ಆಗಸ್ಟ್ 2024, 13:10 IST
ಗುಲಾಮ್‌ ಮೊಹಮ್ಮದ್‌ ಖಾದರ್‌
ಗುಲಾಮ್‌ ಮೊಹಮ್ಮದ್‌ ಖಾದರ್‌   

ಢಾಕಾ: ಬಾಂಗ್ಲಾದೇಶದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಭಾರತವನ್ನು ದೂಷಿಸುವುದನ್ನು ಜಾತೀಯ ಪಕ್ಷದ ಮುಖ್ಯಸ್ಥ ಗುಲಾಮ್‌ ಮೊಹಮ್ಮದ್‌ ಖಾದರ್‌ ಅವರು ಖಂಡಿಸಿದ್ದಾರೆ.

ಪಿಟಿಐಗೆ ಸಂದರ್ಶನ ನೀಡಿದ ಖಾದರ್‌ ಅವರು, ‘ಪ್ರವಾಹ ಅಥವಾ ಪ್ರಾಕೃತಿಕ ವಿಕೋಪಕ್ಕೆ ಮತ್ತೊಬ್ಬರನ್ನು ಹೇಗೆ ದೂಷಿಸುತ್ತೀರಿ?. ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು ಸಾಮಾನ್ಯ. ಭಾರತದಿಂದ ಸ್ವಲ್ಪ ನೀರು ಬಿಟ್ಟಿರುವುದರಿಂದ ಸಮಸ್ಯೆಯಾಗಿದೆ. ಆದರೆ, ಮಳೆಗಾಲದಲ್ಲಿ ನೀರು ಬಿಡದೇ ಇದ್ದರೆ ಅಣೆಕಟ್ಟೆಯು ಒಡೆಯುತ್ತದೆ. ಇದರಿಂದ ಭೀಕರ ಅವಘಡ ಸಂಭವಿಸುತ್ತದೆ’ ಎಂದು ಹೇಳಿದರು.

ಖಾದರ್‌ ಅವರು ಇತ್ತೀಚೆಗೆ ಪತನವಾದ ಶೇಖ್ ಹಸೀನಾ ಅವರ ಸರ್ಕಾರದ ಅವಧಿಯಲ್ಲಿ ‌ವಿರೋಧ ಪಕ್ಷದ ನಾಯಕರಾಗಿದ್ದರು.

ADVERTISEMENT

‘ಎರಡು ರಾಷ್ಟ್ರಗಳು ಉತ್ತಮ ಬಾಂಧವ್ಯವನ್ನು ಬಯಸುತ್ತಿವೆ. ಒಂದು ದೇಶವೇ ಪರಮೋಚ್ಚ ಎಂಬ ಭಾವನೆಯನ್ನು ಬಿಟ್ಟು, ಎರಡು ರಾಷ್ಟ್ರಗಳು ಸಮಾನವಾದದ್ದು ಎಂದು ಪರಿಗಣಿಸಬೇಕು. ‌‌ಜನರ ಆಕ್ರೋಶವು ಭಾರತದ ವಿರುದ್ಧವಲ್ಲ ಬದಲಾಗಿ ಒಂದು ಪಕ್ಷ(ಅವಾಮಿ ಲೀಗ್‌) ಮತ್ತು ಅದರ ನಾಯಕಿಗೆ(ಶೇಖ್ ಹಸೀನಾ) ನೀಡುತ್ತಿರುವ ಪ್ರಶ್ನಾತೀತ ಬೆಂಬಲದ ವಿರುದ್ಧ’ ಎಂದರು.

‘ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ ಕೆಲವರು ಭಾರತ ವಿರೋಧಿ ಭಾವನೆಗಳನ್ನು ಬಳಸಿಕೊಂಡು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಭಾರತ ವಿರೋಧಿ ಭಾವನೆಯು ಅಲ್ಲಿಯ ಜನರ ಮೇಲಲ್ಲ ಬದಲಾಗಿ ಆಡಳಿತ ನಡೆಸುವವರ ಬಗ್ಗೆ’ ಎಂದರು.

ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. 'ತ್ರಿಪುರದಲ್ಲಿ ಗುಮ್ತಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆಯಿಂದ ನೀರು ಬಿಟ್ಟಿರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ' ಎಂದು ಬಾಂಗ್ಲಾ ಆರೋ‍ಪಿಸಿತ್ತು. 

‘ಭಾರತದಲ್ಲಿ ಆಶ್ರಯ ಪಡೆಯುವ ಹಸೀನಾ ಅವರ ನಿರ್ಧಾರವು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತ್ತು. ಅವರ ವಿಚಾರಣೆಯು ಆಗತ್ಯವಾಗಿದ್ದು, ಭಾರತವು ಹಸೀನಾ ಅವರನ್ನು ಬಾಂಗ್ಲಾದೇಶದ ಸರ್ಕಾರಕ್ಕೆ ಹಸ್ತಾಂತರಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.