ಜೆರುಸಲೇಂ: ಇಸ್ರೇಲ್ ಸೇನೆ ಮತ್ತು ಪ್ಯಾಲೆಸ್ಟೀನ್ ಉಗ್ರರ ಗುಂಪುಗಳ ನಡುವೆ ಗಾಜಾಪಟ್ಟಿಯಲ್ಲಿ ಪರಸ್ಪರ ಕ್ಷಿಪಣಿ, ರಾಕೆಟ್ ದಾಳಿ ನಡೆದಿದ್ದು, ಈ ಬೆಳವಣಿಗೆ ಜೆರುಸಲೇಂನ ನಿವಾಸಿಗಳಲ್ಲಿ ಆತಂಕವನ್ನು ಮೂಡಿಸಿದೆ.
ಪ್ಯಾಲೆಸ್ಟೀನ್ ಉಗ್ರರ ಗುಂಪು ರಾಕೆಟ್ ದಾಳಿಯನ್ನು ನಿಲ್ಲಿಸಿದಲ್ಲಿ ಪ್ರತಿಯಾಗಿ ಸೇನೆ ಕೂಡಾ ವಾಯುದಾಳಿಯನ್ನು ಸ್ಥಗಿತಗೊಳಿಸಲಿದೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವರು ಸುಳಿವು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ‘ಅಗತ್ಯ’ ಎನಿಸಿದಲ್ಲಿ ಗಾಜಾ ಪಟ್ಟಿಯಲ್ಲಿ ತೀವ್ರ ದಾಳಿಯನ್ನು ನಡೆಸಲು ಸಜ್ಜಾಗಿರಬೇಕು ಎಂದೂ ತನ್ನ ಸೇನೆಗೆ ಅವರು ಸೂಚನೆ ನೀಡಿದ್ದಾರೆ.
ಜೆನಿನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಸೇನೆಯು ದಾಳಿ ನಡೆಸಿದ ಹಿಂದೆಯೇ ಉಭಯತ್ರರ ನಡುವಿನ ಸಂಘರ್ಷವೂ ತೀವ್ರಗೊಂಡಿದೆ. ಕ್ಷಿಪಣಿ, ಗುಂಡಿನ ದಾಳಿಯಲ್ಲಿ 61 ವರ್ಷದ ಮಹಿಳೆ, ಕನಿಷ್ಠ ಏಳು ಮಂದಿ ಉಗ್ರರು ಅಸುನೀಗಿದ್ದಾರೆ.
ಇಸ್ರೇಲ್ ಮತ್ತು ಪ್ಯಾಲೆಸ್ಟೀನ್‌ನ ನಡುವೆ ದಶಕಗಳಿಂದಲೂ ಸಂಘರ್ಷದ ಸ್ಥಿತಿ ಇದೆ. ಇತ್ತೀಚೆಗೆ ಮರು ಆಯ್ಕೆಗೊಂಡಿರುವ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರಿಗೆ ಇದು ಅಗ್ನಿಪರೀಕ್ಷೆಯಾಗಿದೆ.
ಪ್ಯಾಲೆಸ್ಟೀನ್ ಉಗ್ರರು ಗಾಜಾದಿಂದ ಇಸ್ರೇಲ್‌ನ ದಕ್ಷಿಣ ಭಾಗವನ್ನು ಗುರಿಯಾಗಿಸಿ ರಾಕೆಟ್ ದಾಳಿ ನಡೆಸಿದರೆ ಪ್ರತಿಯಾಗಿ ಇಸ್ರೆಲ್ ಸೇನೆಯು ಗಾಜಾದಲ್ಲಿರುವ ತರಬೇತಿ ಶಿಬಿರ, ರಾಕೆಟ್ ತಯಾರಿಕಾ ಘಟಕವನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ.
ಇಸ್ರೇಲ್‌ನ ರಕ್ಷಣಾ ಸಚಿವ ಓವ್ ಗ್ಯಾಲಂಟ್ ಅವರು, ಸೇನೆ ದಾಳಿಯಲ್ಲಿ ಪ್ಯಾಲೆಸ್ಟೀನ್ ಉಗ್ರರಿಗೆ ತಕ್ಕಉತ್ತರ ನೀಡಲಾಗಿದೆ. ಶಾಂತಿ ಸ್ಥಾಪನೆ ಉದ್ದೇಶ ಈಡೇರುವವರೆಗೆ ನಿರ್ದಿಷ್ಟ ತಾಣ ಗುರಿಯಾಗಿಸಿ ದಾಳಿಗೆ ಸಜ್ಜಾಗಿರಲು ಸೂಚಿಸಲಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.