ವಾಷಿಂಗ್ಟನ್ (ಪಿಟಿಐ): ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆಯಾಗಲು ಬಯಸಿದ್ದ ಜೋ ಬೈಡನ್, ಭಾನುವಾರ ಸ್ಪರ್ಧೆಯಿಂದ ಹಠಾತ್ ಹಿಂದೆ ಸರಿದಿದ್ದಾರೆ.
ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಡೆಮಾಕ್ರಟಿಕ್ ಸದಸ್ಯರೇ ಒತ್ತಾಯಿಸುತ್ತಿದ್ದು, ಅದೇ ಸಂದರ್ಭದಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ.
‘ಎಕ್ಸ್’ನಲ್ಲಿ ತಮ್ಮ ನಿರ್ಧಾರವನ್ನು ಘೋಷಿಸಿರುವ ಬೈಡನ್, ‘ಪಕ್ಷ ಮತ್ತು ದೇಶದ ಹಿತವನ್ನು ಬಯಸಿ ಈ ತೀರ್ಮಾನ ಕೈಗೊಂಡಿದ್ದೇನೆ. ಅಧಿಕಾರಾವಧಿ ಪೂರ್ಣಗೊಳ್ಳುವವರೆಗೆ ಅಂದರೆ ಜನವರಿ 2025ರವರೆಗೆ ಅಧ್ಯಕ್ಷ ಮತ್ತು ಕಮಾಂಡರ್ ಇನ್ ಚೀಫ್ ಆಗಿ ಮುಂದುವರಿಯುವೆ. ಈ ವಾರ ದೇಶವನ್ನು ಉದ್ದೇಶಿಸಿ ಮಾತನಾಡುವೆ’ ಎಂದಿದ್ದಾರೆ.
‘ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ಲಭಿಸಿದ್ದು ಜೀವಮಾನದಲ್ಲಿ ಸಿಕ್ಕ ಅತಿ ದೊಡ್ಡ ಗೌರವ. ಅಧ್ಯಕ್ಷ ಹುದ್ದೆಗೆ ಮರು ಆಯ್ಕೆಯಾಗಲು ಬಯಸಿದ್ದೆ. ಆದರೆ, ಪಕ್ಷ ಮತ್ತು ದೇಶದ ಹಿತಕ್ಕಾಗಿ ನನ್ನ ನಿಲುವನ್ನು ಬದಲಾಯಿಸಿದ್ದೇನೆ. ಅಧಿಕಾರಾವಧಿಯ ಉಳಿದ ಅವಧಿಗೆ ಅಧ್ಯಕ್ಷ ಹುದ್ದೆಯ ಕರ್ತವ್ಯಗಳನ್ನು ಪೂರ್ಣಗೊಳಿಸುವತ್ತ ಗಮನಹರಿಸುವೆ’ ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ಚರ್ಚೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಎದುರು, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಬೈಡನ್ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಇದಾದ ನಂತರ, ಪಕ್ಷದ ಸದಸ್ಯರೇ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಅವರನ್ನು ಒತ್ತಾಯಿಸುತ್ತಿದ್ದರು.
ನವೆಂಬರ್ 5ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.