ADVERTISEMENT

ಇವಿ, ಮೊಬೈಲ್‌, ಕಂಪ್ಯೂಟರ್‌ಗಳಿಗೆ ಬಳಸುವ ಲೀಥಿಯಂ ಅಯಾನ್ ಬ್ಯಾಟರಿ ಸಂಶೋಧಕ ಜಾನ್ ನಿಧನ

ಅಮೆರಿಕದ ಖ್ಯಾತ ರಸಾಯನಶಾಸ್ತ್ರ ಸಂಶೋಧಕ, ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಜಾನ್ ಗುಡ್‌ಎನಫ್ ಇನ್ನಿಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜೂನ್ 2023, 3:33 IST
Last Updated 27 ಜೂನ್ 2023, 3:33 IST
ವಿಜ್ಞಾನಿ ಜಾನ್ ಗುಡ್‌ಎನಫ್
ವಿಜ್ಞಾನಿ ಜಾನ್ ಗುಡ್‌ಎನಫ್   ರಾಯಿಟರ್ಸ್ ಚಿತ್ರ

ಆಸ್ಟಿನ್, (ಅಮೆರಿಕ): ಮೊಬೈಲ್ ಫೋನ್‌ಗಳಲ್ಲಿ, ಡಿಜಿಟಲ್ ಕಂಪ್ಯೂಟರ್‌ಗಳಲ್ಲಿ, ಎಲೆಕ್ಟ್ರಾನಿಕ್ ವಾಹನಗಳಿಗೆ ರಿಚಾರ್ಜ್ ಮಾಡಿ ಬಳಸುವ ‘ಲೀಥಿಯಂ ಅಯಾನ್ ಬ್ಯಾಟರಿ’ (Lithium-ion battery) ಅಭಿವೃದ್ಧಿಯಲ್ಲಿ ಮಹತ್ವದ ಕೆಲಸ ಮಾಡಿದ್ದ ನೊಬೆಲ್ ಪ್ರಶಸ್ತಿ ಪುರಸ್ಕೃತ ಜಾನ್ ಗುಡ್‌ಎನಫ್ ನಿಧನರಾಗಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ ಎಂದು ಟೆಕ್ಸಾಸ್ ವಿಶ್ವವಿದ್ಯಾಲಯ ಘೋಷಣೆ ಮಾಡಿದೆ.

ವಿಶೇಷವೆಂದರೆ ಜಾನ್ ಗುಡ್‌ಎನಫ್ ಶತಾಯುಷಿ ಆಗಿದ್ದರು. ಇದೇ ಜುಲೈನಲ್ಲಿ 101 ನೇ ಜನ್ಮದಿನಾಚರಣೆ ಸಂಭ್ರಮವನ್ನು ಎದುರು ನೋಡುತ್ತಿದ್ದರು.

ADVERTISEMENT

1922 ಜುಲೈ 25 ರಂದು ಜರ್ಮನಿಯಲ್ಲಿ ಜನಿಸಿದ್ದ ಜಾನ್, ಅಮೆರಿಕದಲ್ಲಿ ವಿದ್ಯಾಭ್ಯಾಸ ಪಡೆದು ಅಲ್ಲಿಯೇ ನೆಲೆ ನಿಂತು ರಸಾಯನಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದರು.

ಎಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ಹಾಗೂ ಎಲೆಕ್ಟ್ರಾನಿಕ್ ವಾಹನಗಳಿಗೆ ಸುಲಭವಾಗಿ ಜೋಡಿಸಬಹುದಾದ ಮತ್ತು ರಿಚಾರ್ಚ್ ಮಾಡಬಹುದಾದ ಲೀಥಿಯಂ ಅಯಾನ್ ಬ್ಯಾಟರಿ ಅಭಿವೃದ್ಧಿಗಾಗಿ ಜಾನ್ ಅವರು ಸುಮಾರು 3 ದಶಕಗಳ ಕಾಲ ಅವಿರತವಾಗಿ ಶ್ರಮಿಸಿದ್ದರು. ಇದಕ್ಕಾಗಿ ಅವರಿಗೆ 2019 ರಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಸಂದಿತ್ತು. ಜಾನ್ ಗುಡ್‌ಎನಫ್ ಸುಮಾರು 40 ವರ್ಷ ಟೆಕ್ಸಾಸ್ ವಿಶ್ವವಿದ್ಯಾಲಯಕ್ಕೆ ಸಂಪನ್ಮೂಲ ಸದಸ್ಯರಾಗಿದ್ದರು.

ಲೀಥಿಯಂ ಬ್ಯಾಟರಿ ಸಂಶೋಧನೆಯಲ್ಲಿ ಜಾನ್ ಅವರ ಕೆಲಸ ಕ್ರಾಂತಿಕಾರಿಯಾದದ್ದು ಎಂದು ಬಣ್ಣಿಸಲಾಗಿದೆ.

ಲೀಥಿಯಂ ಬ್ಯಾಟರಿಗಳು ಇಂದು ಹಲವು ರಂಗಗಳಲ್ಲಿ ಬಹುಪಯೋಗಿಯಾಗಿ ಅನುಕೂಲ ಮಾಡುತ್ತಿವೆ. ವಾಹನಗಳಿಗೆ ಬಳಸುವ ಸಾಂಪ್ರದಾಯಿಕ ಇಂಧನಗಳ ಬಳಕೆಯನ್ನು ಈ ಬ್ಯಾಟರಿಗಳು ಸಂಪೂರ್ಣವಾಗಿ ತಗ್ಗಿಸಲಿವೆ. ಈ ಅಭಿವೃದ್ಧಿ ಕೆಲಸವನ್ನು ಜಾನ್ ಅವರು ಬ್ರಿಟಿಷ್ ರಸಾಯನಶಾಸ್ತ್ರ ವಿಜ್ಞಾನಿ ಸ್ಟಾನ್ಲಿ ವಿಟಿಂಗ್‌ಹ್ಯಾಮ್ ಮತ್ತು ಜಪಾನ್‌ನ ರಸಾಯನಶಾಸ್ತ್ರ ವಿಜ್ಞಾನಿ ಅಕಿರಾ ಯೋಶಿನೋ ಅವರ ಜೊತೆಗೂಡಿಕೊಂಡು ಮಾಡಿದ್ದರು.

ಈ ಬಗ್ಗೆ ಒಮ್ಮೆ ಸಮಾರಂಭವೊಂದರಲ್ಲಿ ಮಾತನಾಡಿದ್ದ ಜಾನ್ ಅವರು, ‘ಕೆಲವು ಕೆಲಸಕ್ಕೆ ಈ ಬ್ಯಾಟರಿ ಉಪಯೋಗ ಆಗಬಹುದು ಎಂದು ನಾನು ಅಂದುಕೊಂಡಿದ್ದೆ. ಇದು ಕ್ರಾಂತಿಯನ್ನೇ ಮಾಡಿ ಬಿಡುತ್ತದೆಂದು ಎಣಿಸಿರಲಿಲ್ಲ’ ಎಂದು ಹೇಳಿದ್ದರು.

ಜಾನ್ ಗುಡ್‌ಎನಫ್ ನಿಧನಕ್ಕೆ ವಿಜ್ಞಾನಿಗಳು, ಅನೇಕ ಸಂಶೋಧಕರು ಕಂಬನಿ ಮಿಡಿದಿದ್ದಾರೆ.

ಆಧಾರ– ಎಪಿ, ನ್ಯೂಯಾರ್ಕ್ ಟೈಮ್ಸ್,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.