ADVERTISEMENT

ASEAN 2023: ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಬಲಪಡಿಸಲು ಜಂಟಿ ಪ್ರಯತ್ನ: ಮೋದಿ

ಪಿಟಿಐ
Published 7 ಸೆಪ್ಟೆಂಬರ್ 2023, 16:14 IST
Last Updated 7 ಸೆಪ್ಟೆಂಬರ್ 2023, 16:14 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಜಕಾರ್ತ: ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಬಲಪಡಿಸಲು ಜಂಟಿ ಪ್ರಯತ್ನ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. 

ಗುರುವಾರ ನಡೆದ ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ)–ಭಾರತ ಮತ್ತು ಪೂರ್ವ ಏಷ್ಯಾ ರಾಷ್ಟ್ರಗಳ ಶೃಂಗದಲ್ಲಿ ಮಾತನಾಡಿದ ಅವರು, ‘ಮುಕ್ತ ಇಂಡೊ–ಪೆಸಿಫಿಕ್‌ ಪ್ರದೇಶದ ಖಾತ್ರಿ ಈ ಹೊತ್ತಿನ ಅಗತ್ಯ. ದಕ್ಷಿಣ ಚೀನಾ ಸಮುದ್ರ ನೀತಿ ಸಂಹಿತೆಯು ಪರಿಣಾಮಕಾರಿ ಆಗಿರಬೇಕು ಮತ್ತು ಸಾಗರ ನೀತಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಕಾನೂನಿಗೆ (ಯುಎನ್‌ಸಿಎಲ್‌ಒಎಸ್‌) ಅನುಗುಣವಾಗಿರಬೇಕು ಎಂದು ಭಾರತ ಅಪೇಕ್ಷಿಸುತ್ತದೆ’ ಎಂದು ಹೇಳಿದರು.

ADVERTISEMENT

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಸೇನೆಯ ಬಲವರ್ಧನೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಕಳವಳ ಹೆಚ್ಚುತ್ತಿರುವ ನಡುವೆಯೇ ಜಾಗತಿಕ ವೇದಿಕೆಯಲ್ಲಿ ಮೋದಿ ಈ ವಿಷಯ ಪ್ರಸ್ತಾಪಿಸಿದರು. 

ದಕ್ಷಿಣ ಚೀನಾ ಸಮುದ್ರದ ಮೇಲಿನ ಹಕ್ಕು ಪ್ರತಿಪಾದಿಸುವ ಚೀನಾದ ಪ್ರಮಾಣಿತ ನಕ್ಷೆಯನ್ನು ಮಲೇಷಿಯಾ ವಿಯೆಟ್ನಾಂ ಮತ್ತು ಫಿಲಿಪೀನ್ಸ್‌ ಸೇರಿದಂತೆ ಹಲವು ಅಸಿಯಾನ್‌ ರಾಷ್ಟ್ರಗಳು ವಿರೋಧಿಸಿದ್ದವು.   

ತೈವಾನ್, ದಕ್ಷಿಣ ಚೀನಾ ಸಮುದ್ರ, ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಅನ್ನು ಒಳಗೊಂಡ ‘ಪ್ರಮಾಣಿತ ನಕ್ಷೆ’ಯ 2023 ಆವೃತ್ತಿಯನ್ನು ಚೀನಾ ಆಗಸ್ಟ್ 28 ರಂದು ಬಿಡುಗಡೆ ಮಾಡಿದೆ. ಭಾರತವು ಈ ನಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದೆ. 

ಇದೆಲ್ಲವನ್ನೂ ಒಳಗೊಂಡಂತೆ, ಭೌಗೋಳಿಕ ರಾಜಕೀಯ ಸಂಘರ್ಷಗಳನ್ನು ಉಲ್ಲೇಖಿಸಿ ಆಸಿಯಾನ್‌ ಶೃಂಗದಲ್ಲಿ ಮಾತನಾಡಿದ ಮೋದಿ, ‘ಇದು ಯುದ್ಧದ ಕಾಲವಲ್ಲ ಮತ್ತು ಸಂಘರ್ಷಗಳ ಪರಿಹಾರಕ್ಕೆ ಮಾತುಕತೆ ಮತ್ತು ರಾಜತಾಂತ್ರಿಕತೆ ಏಕೈಕ ಮಾರ್ಗವಾಗಿದೆ’ ಎಂದು ಹೇಳಿದರು. 

‘ಭಯೋತ್ಪಾದನೆ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷಗಳು ನಮ್ಮೆಲ್ಲರ ದೊಡ್ಡ ಸವಾಲುಗಳಾಗಿವೆ. ಪ್ರಸ್ತುತ ಜಾಗತಿಕ ಭೌಗೋಳಿಕ ಪರಿಸ್ಥಿತಿಯು ಸವಾಲು ಮತ್ತು ಅನಿಶ್ಚಿತತೆಗಳಿಂದ ಆವರಿಸಿದೆ’ ಎಂದು ಪ್ರಧಾನಿ ಹೇಳಿದರು. 

‘ಅಂತರರಾಷ್ಟ್ರೀಯ ಕಾನೂನುಗಳಿಗೆ ಸಂಪೂರ್ಣವಾಗಿ ಬದ್ಧವಾಗಿರಬೇಕಾದ್ದು ಇಂದಿನ ಅಗತ್ಯವಾಗಿದೆ. ಎಲ್ಲಾ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಬಲಪಡಿಸಲು ಪ್ರತಿಯೊಬ್ಬರ ಬದ್ಧತೆ ಮತ್ತು ಜಂಟಿ ಪ್ರಯತ್ನಗಳೂ ಬೇಕು. ಸಮಸ್ಯೆಗಳ ಪರಿಹಾರಕ್ಕೆ ಚರ್ಚೆ ಮತ್ತು ರಾಜತಾಂತ್ರಿಕತೆಯೇ ದಾರಿ’ ಎಂದು ಅವರು ಪ್ರತಿಪಾದಿಸಿದರು. 

ಕಳೆದ ವರ್ಷ ಸೆಪ್ಟೆಂಬರ್ 16 ರಂದು ಉಜ್ಬೆಕಿಸ್ತಾನದ ಸಮರ್ಕಂಡ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ದ್ವಿಪಕ್ಷೀಯ ಸಭೆಯಲ್ಲಿ ಮೋದಿ ಇದೇ ಮಾತುಗಳನ್ನು ಆಡಿದ್ದರು. ‘ ಇದು ಯುದ್ಧದ ಕಾಲವಲ್ಲ. ಉಕ್ರೇನ್ ವಿರುದ್ಧದ ಸಂಘರ್ಷ ಕೊನೆಗೊಳಿಸಬೇಕು‘ ಎಂದು ಪುಟಿನ್‌ಗೆ ಸಲಹೆ ನೀಡಿದ್ದರು. 

ಸಹಕಾರ ವಿಸ್ತರಣೆಗೆ 12 ಅಂಶಗಳ ಪ್ರಸ್ತಾವ

ಆಸಿಯಾನ್‌ ಶೃಂಗದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ವ್ಯಾಪಾರ ಮತ್ತು ಡಿಜಿಟಲ್ ರೂಪಾಂತರದಂತಹ ಕ್ಷೇತ್ರಗಳಲ್ಲಿ ಭಾರತ ಮತ್ತು 10-ರಾಷ್ಟ್ರಗಳ ಆಸಿಯಾನ್ ನಡುವಿನ ಸಹಕಾರವನ್ನು ವಿಸ್ತರಿಸಲು 12 ಅಂಶಗಳ ಪ್ರಸ್ತಾವ ಮಂಡಿಸಿದರು. 

ಆಗ್ನೇಯ ಏಷ್ಯಾ, ಭಾರತ, ಪಶ್ಚಿಮ ಏಷ್ಯಾ ಮತ್ತು ಯುರೋಪ್‌ ಅನ್ನು ಬೆಸೆಯುವ ಬಹು-ಮಾದರಿಯ ಸಂಪರ್ಕ, ಆರ್ಥಿಕ ಕಾರಿಡಾರ್ ಸ್ಥಾಪನೆ ಮತ್ತು ಆಸಿಯಾನ್ ಪಾಲುದಾರರೊಂದಿಗೆ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಪಾಲುದಾರಿಕೆಯನ್ನು ಹಂಚಿಕೊಳ್ಳಲು ನೆರವಾಗುವುದಾಗಿ ಮೋದಿ ಘೋಷಿಸಿದರು. 

ಇದರ ಜತೆಗೆ, ಉಗ್ರವಾದ, ಭಯೋತ್ಪಾದನೆಗೆ ಆರ್ಥಿಕ ನೆರವು, ಸೈಬರ್-ತಪ್ಪು ಮಾಹಿತಿಯ ವಿರುದ್ಧ ಸಾಮೂಹಿಕ ಹೋರಾಟ, ಬಹುಪಕ್ಷೀಯ ವೇದಿಕೆಗಳಲ್ಲಿ ದಕ್ಷಿಣದ ರಾಷ್ಟ್ರಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸುವುದೂ ಕೂಡ 12 ಅಂಶಗಳಲ್ಲಿ ಒಳಗೊಂಡಿದ್ದವು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. 

ಸಾಗರ ನೀತಿ ಸಹಕಾರ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ಎರಡು ಜಂಟಿ ಹೇಳಿಕೆಗಳಿಗೆ ಶೃಂಗಸಭೆಯಲ್ಲಿ ಅಂಗೀಕಾರ ದೊರೆಯಿತು.  

ಕೋವಿಡ್‌ ನಂತರದ ಪರಿಸ್ಥಿತಿಯಲ್ಲಿ ಜಾಗತಿಕ ಮಟ್ಟದಲ್ಲಿ ದಕ್ಷಿಣದ ಧ್ವನಿಯನ್ನು ಇನ್ನಷ್ಟು ಬಲಪಡಿಸಲು ನಿಯಮ ಆಧಾರಿತ ವ್ಯವಸ್ಥೆಯ ನಿರ್ಮಾಣವಾಗಬೇಕು ಎಂದೂ ಮೋದಿ ಇದೇ ವೇಳೆ ಹೇಳಿದರು.

‘ಜಾಗತಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಆಸಿಯಾನ್‌ ಗುಂಪು ಜಗತ್ತಿನ ಬೆಳವಣಿಗೆಯ ಕೇಂದ್ರಬಿಂದುವಾಗಿ ಕೆಲಸ ಮಾಡುತ್ತಿದೆ. 21ನೇ ಶತಮಾನ ಏಷ್ಯಾದ್ದಾಗಿದೆ. ಇದು ನಮ್ಮೆಲ್ಲರ ಶತಮಾನವಾಗಿದೆ’ ಎಂದಿದ್ದಾರೆ.

ಭಾರತದ ಜಿ20 ಅಧ್ಯಕ್ಷತೆ, ಚಂದ್ರಯಾನ–3 ಯಶಸ್ಸಿಗೆ ಆಸಿಯಾನ್‌ ರಾಷ್ಟ್ರಗಳ ನಾಯಕರು ಮೋದಿ ಅವರನ್ನು ಅಭಿನಂದಿಸಿದರು.   

ಟಿಮೊರ್‌ ಲೆಸ್ಟ್‌ನಲ್ಲಿ ರಾಯಭಾರ ಕಚೇರಿ

ಟಿಮೊರ್‌ ಲೆಸ್ಟ್‌ನ ರಾಜಧಾನಿ ದಿಲಿಯಲ್ಲಿ ಭಾರತೀಯ ರಾಯಭಾರ ಕಚೇರಿ ಆರಂಭಿಸಲು ನಿರ್ಧರಿಸಿರುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. 

ಆಸಿಯಾನ್‌–ಭಾರತ ಶೃಂಗಸಭೆಯಲ್ಲಿ ಮೋದಿ ಈ ವಿಷಯ ತಿಳಿಸಿದರು ಎಂದು ಭಾರತೀಯ ವಿದೇಶಾಂಗ ಇಲಾಖೆ  ಪ್ರಕಟಣೆಯಲ್ಲಿ ತಿಳಿಸಿದೆ. 

ಈ ನಿರ್ಧಾರವು ಆಸಿಯಾನ್‌ ಮತ್ತು ಟಿಮೊರ್ ಲೆಸ್ಟೆಗೆ ಭಾರತ ನೀಡುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದೆ. 2022ರಲ್ಲಿ ವೀಕ್ಷಕ ರಾಷ್ಟ್ರವಾಗಿ ಆಸಿಯಾನ್‌ ಸೇರಿದ್ದ ಟಿಮೊರ್‌ ಲೆಸ್ಟ್‌ ಸದ್ಯ ಸದಸ್ಯ ರಾಷ್ಟ್ರವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.