ವಾಷಿಂಗ್ಟನ್: ಅಮೆರಿಕದ ಪ್ರಜೆಗಳನ್ನು ಮದುವೆಯಾಗಿರುವ ವಲಸಿಗರಿಗೆ ಪೌರತ್ವ ನೀಡುವ ಪ್ರಕ್ರಿಯೆಯನ್ನು ಸರಾಗಗೊಳಿಸುವ ಉದ್ದೇಶದೊಂದಿಗೆ ಜೋ ಬೈಡನ್ ಆಡಳಿತವು ಜಾರಿಗೆ ತಂದಿದ್ದ ನೀತಿಯೊಂದನ್ನು ಫೆಡರಲ್ ನ್ಯಾಯಾಧೀಶರು ಗುರುವಾರ ರದ್ದುಗೊಳಿಸಿದ್ದಾರೆ.
ಅಮೆರಿಕದ ಪ್ರಜೆಗಳನ್ನು ಮದುವೆಯಾಗಿರುವ ವಲಸಿಗರು ತಮ್ಮ ಬಳಿ ಸೂಕ್ತ ದಾಖಲೆಗಳು ಇಲ್ಲದಿದ್ದರೂ, ದೇಶವನ್ನು ತೊರೆಯದೆಯೇ ‘ಗ್ರೀನ್ ಕಾರ್ಡ್’ಗೆ ಅರ್ಜಿ ಸಲ್ಲಿಸಲು ಈ ನೀತಿ ಅವಕಾಶ ಮಾಡಿಕೊಟ್ಟಿತ್ತು. ವಲಸಿಗ ಕುಟುಂಬಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷರು ಜಾರಿಗೊಳಿಸಿರುವ ಅತಿದೊಡ್ಡ ಕಾರ್ಯಕ್ರಮ ಇದು ಎಂದು ಈ ನೀತಿಯನ್ನು ಬಣ್ಣಿಸಲಾಗಿತ್ತು.
ಗಡೀಪಾರು ಆತಂಕ ಎದುರಿಸುತ್ತಿದ್ದ ಸುಮಾರು 5 ಲಕ್ಷ ವಲಸಿಗರು ಇದರಿಂದ ತಾತ್ಕಾಲಿಕವಾಗಿ ನಿರಾಳರಾಗಿದ್ದರು. ಆದರೆ, ಈ ನೀತಿಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿಗಳು ಸಲ್ಲಿಕೆಯಾದ್ದರಿಂದ ಫೆಡರಲ್ ನ್ಯಾಯಾಧೀಶ ಕೆ.ಕ್ಯಾಂಪ್‌ಬೆಲ್ ಬಾರ್ಕರ್ ಅವರು ಆಗಸ್ಟ್ ತಿಂಗಳಲ್ಲಿ ತಡೆ ನೀಡಿದ್ದರು.
ಗುರುವಾರ ಅಂತಿಮ ತೀರ್ಪು ನೀಡಿರುವ ಬಾರ್ಕರ್, ಈ ನೀತಿಯನ್ನು ರದ್ದುಗೊಳಿಸುವುದಾಗಿ ಪ್ರಕಟಿಸಿದರು. ‘ಈ ಕಾರ್ಯಕ್ರಮ ಅನುಷ್ಠಾನಗೊಳಿಸುವ ಮೂಲಕ ಬೈಡನ್ ಆಡಳಿತವು ತನ್ನ ಅಧಿಕಾರದ ವ್ಯಾಪ್ತಿಯನ್ನು ಮೀರಿದೆ’ ಎಂದು ತೀರ್ಪಿನಲ್ಲಿ ತಿಳಿಸಿದರು.
‘ಕುಟುಂಬಗಳನ್ನು ಒಟ್ಟಿಗೆ ಇಟ್ಟುಕೊಳ್ಳುವುದು’ ಎಂಬ ಘೋಷವಾಕ್ಯದೊಂದಿಗೆ ಬೈಡನ್ ಆಡಳಿತ ಜಾರಿಗೊಳಿಸಿರುವ ಈ ಅಲ್ಪಾವಧಿ ನೀತಿಯು, ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಮುಂದುವರಿಯುವುದು ಅನುಮಾನ ಎನಿಸಿತ್ತು. ಇದೀಗ ಅದಕ್ಕೂ ಮೊದಲೇ ರದ್ದಾಗಿರುವುದರಿಂದ ಸಾವಿರಾರು ವಲಸಿಗ ಕುಟುಂಬಗಳ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ.
ಬೈಡನ್ ಜಾರಿಗೆ ತಂದಿರುವ ನೀತಿಯು ದೇಶದ ಆರ್ಥಿಕ ಹೊರೆಯನ್ನು ಹೆಚ್ಚಿಸಿದೆಯಲ್ಲದೆ, ಇನ್ನಷ್ಟು ವಲಸಿಗರನ್ನು ಅಮೆರಿಕದತ್ತ ಸೆಳೆಯಬಹುದು ಎಂದು ರಿಪಬ್ಲಿಕನ್ ಪಕ್ಷದವರು ಟೀಕಿಸಿದ್ದರು.
ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥೆಯಾಗಿ ವೈಲ್ಸ್
ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪ್ರಚಾರ ತಂಡದ ವ್ಯವಸ್ಥಾಪಕಿ ಸೂಸನ್ ವೈಲ್ಸ್ ಅವರನ್ನು ಶ್ವೇತಭವನದ ಸಿಬ್ಬಂದಿ ವಿಭಾಗದ ಮುಖ್ಯಸ್ಥೆಯಾಗಿ ಗುರುವಾರ ನೇಮಕ ಮಾಡಿದರು. ಈ ಉನ್ನತ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಗೌರವ ಅವರಿಗೆ ಒಲಿದಿದೆ. ‘ಅಮೆರಿಕವನ್ನು ಇನ್ನಷ್ಟು ಪ್ರಬಲ ರಾಷ್ಟ್ರವಾಗಿಸಲು ಸೂಸಿ (ಸೂಸನ್) ಅವರು ದಣಿವರಿಯದೆ ಕೆಲಸ ಮಾಡುವುದನ್ನು ಮುಂದುವರಿಸಲಿದ್ದಾರೆ. ಅಮೆರಿಕದ ಇತಿಹಾಸದಲ್ಲಿ ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥರಾದ ಮೊದಲ ಮಹಿಳೆ ಎಂಬ ಗೌರವ ಪಡೆಯಲು ಸೂಸಿ ಅರ್ಹರು. ಅವರು ನಮ್ಮ ದೇಶವನ್ನು ಹೆಮ್ಮೆ ಪಡುವಂತೆ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.