ADVERTISEMENT

ಟ್ರಂಪ್‌ ಹತ್ಯೆಗೆ ಇರಾನ್‌ ಸಂಚು: ಅಮೆರಿಕ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 23:30 IST
Last Updated 9 ನವೆಂಬರ್ 2024, 23:30 IST
ಡೊನಾಲ್ಡ್‌ ಟ್ರಂಪ್
ಡೊನಾಲ್ಡ್‌ ಟ್ರಂಪ್   

ನ್ಯೂಯಾರ್ಕ್‌/ ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಇರಾನ್‌ನ ಸಂಚುಕೋರರು ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯೋಜಿಸಿದ್ದರು ಎಂದು ಮ್ಯಾನ್‌ಹಟನ್‌ನ ಫೆಡರಲ್ ಪ್ರಾಸಿಕ್ಯೂಟರ್‌ಗಳು ಶುಕ್ರವಾರ ಹೇಳಿದ್ದಾರೆ.

ಸಂಚು ಕಾರ್ಯಗತಗೊಳಿಸಲು ಇರಾನ್‌ನ ರೆವಲ್ಯೂಷನರಿ ಗಾರ್ಡ್‌, ಸೆಪ್ಟೆಂಬರ್‌ನಲ್ಲಿ ಬಾಡಿಗೆ ಹಂತಕರನ್ನು ನಿಯೋಜಿಸಿತ್ತು ಎಂದು ಸಂಚುಗಾರರಲ್ಲಿ ಒಬ್ಬ ಹೇಳಿರುವುದಾಗಿ ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಯಲ್ಲಿ ಆರೋಪಿಸಿದ್ದಾರೆ. 

ಮ್ಯಾನ್‌ಹಟನ್‌ನ ಫೆಡರಲ್ ಕೋರ್ಟ್‌ನಲ್ಲಿ ದಾಖಲಾಗಿರುವ ದೂರಿನ ಪ್ರಕಾರ, ಟ್ರಂಪ್‌ ಮೇಲೆ ನಿಗಾ ಇಡುವಂತೆ ಮತ್ತು ಅಂತಿಮವಾಗಿ ಅವರನ್ನು ಕೊಲ್ಲುವಂತೆ ಇರಾನ್‌ ರೆವಲ್ಯೂಷನರಿ ಗಾರ್ಡ್‌ ಸೆಪ್ಟೆಂಬರ್‌ ತಿಂಗಳಲ್ಲಿ ಸೂಚನೆ ನೀಡಿತ್ತು ಎಂದು ಬಾಡಿಗೆ ಹಂತಕರಲ್ಲಿ ಒಬ್ಬಾತ ಎಫ್‌ಬಿಐಗೆ ಮಾಹಿತಿ ನೀಡಿದ್ದಾನೆ.

ADVERTISEMENT

ಪತ್ರಕರ್ತ ಮಸಿಹ್ ಅಲಿನೆಜಾದ್ ಮತ್ತು ಟ್ರಂಪ್‌ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಮಸಿಹ್‌ ಅವರು ಇರಾನ್‌ನಲ್ಲಿ ಮಹಿಳೆಯರ ಹಕ್ಕುಗಳ ಮೇಲಿನ ನಿರ್ಬಂಧವನ್ನು ಟೀಕಿಸಿಕೊಂಡು ಬಂದಿರುವ ಬ್ರೂಕ್ಲಿನ್‌ನ ಮಾನವ ಹಕ್ಕುಗಳ ಕಾರ್ಯಕರ್ತರೂ ಆಗಿದ್ದಾರೆ. ಟ್ರಂಪ್‌ ತಮ್ಮ ಮೊದಲ ಅವಧಿಯ ಆಡಳಿತದಲ್ಲಿ ಇರಾನ್‌ ಜತೆಗೆ ಅಣು ಒಪ್ಪಂದ ರದ್ದುಪಡಿಸಿ, ಆ ದೇಶದ ಮೇಲೆ ನಿರ್ಬಂಧಗಳನ್ನು ಹೇರಿದ್ದರು. ಇರಾನ್‌ನ ಈ ಹಿಂದಿನ ಸೇನಾ ಮುಖ್ಯಸ್ಥ ಜನರಲ್‌ ಖಾಸಿಂ ಸೊಲೆಮಾನಿ ಅವರ ಹತ್ಯೆಗೂ ಸೂಚನೆ ಕೊಟ್ಟಿದ್ದರು. ಈ ಕಾರಣಕ್ಕೆ ಇವರಿಬ್ಬರ ಹತ್ಯೆಗೆ ಬಾಡಿಗೆ ಹಂತಕ 51 ವರ್ಷದ ಫರ್ಹಾದ್ ಶಾಕಿರಿ ಎಂಬಾತನಿಗೆ ಇರಾನ್‌ ಸುಪಾರಿ ನೀಡಿತ್ತು ಎಂಬ ಅಂಶ ದೂರಿನಲ್ಲಿದೆ.

ಅಫ್ಗಾನಿಸ್ತಾನ ಪ್ರಜೆಯಾಗಿರುವ ಶಾಕಿರಿ, ದರೋಡೆ ಪ್ರಕರಣದಲ್ಲಿ ನ್ಯೂಯಾರ್ಕ್‌ನ ಜೈಲುಗಳಲ್ಲಿ 14 ವರ್ಷ ಕಳೆದಿದ್ದಾನೆ. ಈತ ತನ್ನ ಬಾಲ್ಯದಲ್ಲೇ ಅಮೆರಿಕಕ್ಕೆ ವಲಸೆ ಬಂದಿದ್ದ. ಜೈಲು ಶಿಕ್ಷೆ ಅನುಭವಿಸಿದ ನಂತರ ಈತನನ್ನು 2008ರಲ್ಲಿ ಗಡೀಪಾರು ಮಾಡಲಾಗಿತ್ತು. ಶಾಕಿರಿ ಸದ್ಯ ತಲೆಮರೆಸಿಕೊಂಡಿದ್ದು, ಇರಾನ್‌ನಲ್ಲಿ ನೆಲಸಿದ್ದಾನೆಂದು ನಂಬಲಾಗಿದೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

ಇರಾನ್ ವಿದೇಶಾಂಗ ಸಚಿವಾಲಯ ಈ ಆರೋಪ ನಿರಾಕರಿಸಿದೆ. ಟ್ರಂಪ್ ಹತ್ಯೆಯ ಸಂಚು 'ಸಂಪೂರ್ಣವಾಗಿ ಆಧಾರರಹಿತ' ಎಂದು ಇರಾನ್ ವಿದೇಶಾಂಗ ಸಚಿವಾಲಯ ಹೇಳಿದೆ. 

ನೆವಾಡದಲ್ಲೂ ಟ್ರಂಪ್‌ ಗೆಲುವು
ಅಧ್ಯಕ್ಷೀಯ ಚುನಾವಣೆಯಲ್ಲಿ ಫಲಿತಾಂಶ ನಿರ್ಣಯಿಸುವ ಪ್ರಮುಖ ರಾಜ್ಯಗಳಲ್ಲಿ ಒಂದೆನಿಸಿದ್ದ ನೆವಾಡದ ಫಲಿತಾಂಶವು ಪ್ರಕಟವಾಗಿದ್ದು ಡೆಮಾಕ್ರಟ್‌ ಪಕ್ಷದ ಭದ್ರಕೋಟೆ ಎನಿಸಿದ್ದ ಈ ರಾಜ್ಯದಲ್ಲೂ ಟ್ರಂಪ್‌ ಗೆಲುವಿನ ನಗೆ ಬೀರಿದ್ದಾರೆ. 2004ರಿಂದಲೂ ಈ ರಾಜ್ಯದ ಮತದಾರರ ಮನ ಗೆಲ್ಲಲು ರಿಪಬ್ಲಿಕನ್‌ ಅಭ್ಯರ್ಥಿಗಳಿಗೆ ಸಾಧ್ಯವಾಗಿರಲಿಲ್ಲ. 2020ರ ಚುನಾವಣೆಯಲ್ಲಿ ಅಧ್ಯಕ್ಷ ಜೋ ಬೈಡನ್‌ ಅವರು ನೆವಾಡದಲ್ಲಿ ಗೆಲುವು ಸಾಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.