ADVERTISEMENT

ಕಾಬೂಲ್ ವಾಯುಪ್ರದೇಶ ಬಂದ್: ದೆಹಲಿ–ಕಾಬೂಲ್ ಏರ್‌ ಇಂಡಿಯಾ ವಿಮಾನ ರದ್ದು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 11:05 IST
Last Updated 16 ಆಗಸ್ಟ್ 2021, 11:05 IST
ಕಾಬೂಲ್ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ದಂಡು: ಅಮೆರಿಕ ಪಡೆಯ ಭದ್ರತೆ–ಎಎಫ್‌ಪಿ ಚಿತ್ರ
ಕಾಬೂಲ್ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ದಂಡು: ಅಮೆರಿಕ ಪಡೆಯ ಭದ್ರತೆ–ಎಎಫ್‌ಪಿ ಚಿತ್ರ   

ನವದೆಹಲಿ: ನಿಯಂತ್ರಿಸಲು ಅಸಾಧ್ಯವಾದ ಮಟ್ಟಕ್ಕೆ ಪ್ರಯಾಣಿಕರ ಆಗಮನವಾಗುತ್ತಿರುವ ಹಿನ್ನೆಲೆಯಲ್ಲಿ ಕಾಬೂಲ್ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಅಲ್ಲಿನ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂದರೆ, ಅಲ್ಲಿ ಯಾವುದೇ ವಿಮಾನ ಇಳಿಯಲುಸಾಧ್ಯವಿಲ್ಲ. ಜನರನ್ನು ಹೊರತರಲು ಅಫ್ಗಾನಿಸ್ತಾನಕ್ಕೆ ಹಾರಲು ನಿಯೋಜಿಸಲಾದ ಏರ್ ಇಂಡಿಯಾ ವಿಮಾನವು ಇನ್ನುಮುಂದೆ ಅಲ್ಲಿಗೆ ತೆರಳಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಅಫ್ಘಾನಿಸ್ತಾನದ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಅಮೆರಿಕದಿಂದ ಬರುವ ಏರ್ ಇಂಡಿಯಾ ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಎಐ-126 (ಚಿಕಾಗೋ-ನವದೆಹಲಿ) ಮತ್ತು ಎಐ-174 (ಸ್ಯಾನ್ ಫ್ರಾನ್ಸಿಸ್ಕೋ-ನವದೆಹಲಿ) ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಶಾರ್ಜಾ ಮೂಲಕ ಭಾರತಕ್ಕೆ ಆಗಮಿಸಲಿವೆ. ಭಾರತದಿಂದ ಅಮೆರಿಕಗೆ ಹೊರಡುವ ವಿಮಾನಗಳನ್ನು ಮಾರ್ಗ ಬದಲಿಸಲು ಏರ್‌ ಇಂಡಿಯಾ ಸಿದ್ಧತೆ ನಡೆಸಿದೆ.

ADVERTISEMENT

ಅಫ್ಗಾನಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರವು ಎಲ್ಲಾ ವಿಮಾನಗಳ ಮಾರ್ಗ ಬದಲಿಸುವಂತೆ ಕೇಳಿದೆ. ಕಾಬೂಲ್ ವಾಯುಪ್ರದೇಶದ ಮೂಲಕ ಯಾವುದೇ ಸಾರಿಗೆಯನ್ನು ನಿಯಂತ್ರಿಸಲಾಗುವುದಿಲ್ಲ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಚಿಕಾಗೊದಿಂದ ದೆಹಲಿಗೆ ಬರುವ ಏರ್ ಇಂಡಿಯಾ ವಿಮಾನವು ತನ್ನ ಮಾರ್ಗ ಬದಲಾಯಿಸಿದೆ. ಅಫ್ಘಾನಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿದ ಸ್ವಲ್ಪ ಸಮಯದ ನಂತರ ನಿರ್ಗಮಿಸಿತು, ಬಾಕುವಿನಿಂದ ದೆಹಲಿಗೆ ಹೋಗುವ ಟೆರ್ರಾ ಏವಿಯಾ ವಿಮಾನವೂ ಸಹ ಮಾರ್ಗ ಬದಲಿಸಿದೆ ಎಂದು ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್ ರಾಡಾರ್‌ 24 ಟ್ವೀಟ್ ಮಾಡಿದೆ.

‘ಜನ ಜಂಗುಳಿ ಮತ್ತು ಈ ಸಮಯ ಬಳಸಿಕೊಂಡು ಆಗುತ್ತಿರುವ ಲೂಟಿಯನ್ನು ತಡೆಗಟ್ಟಲು ಹಮೀದ್ ಕರ್ಜೈ ವಿಮಾನ ನಿಲ್ದಾಣದಿಂದ ಯಾವುದೇ ವಾಣಿಜ್ಯ ವಿಮಾನಗಳು ಇರುವುದಿಲ್ಲ. ದಯವಿಟ್ಟು ವಿಮಾನ ನಿಲ್ದಾಣಕ್ಕೆ ಧಾವಿಸಬೇಡಿ’ ಎಂದು ಕಾಬೂಲ್ ವಿಮಾನ ನಿಲ್ದಾಣ ಪ್ರಾಧಿಕಾರವು ಹೇಳಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ಕಾಬೂಲ್ ವಿಮಾನ ನಿಲ್ದಾಣ ‘ಅನಿಯಂತ್ರಿತ’ವಾಗಿದೆ ಎಂದು ಅಧಿಕಾರಿಗಳು ಘೋಷಿಸಿದ ಬೆನ್ನಲ್ಲೇ ಏರ್ ಇಂಡಿಯಾ ತನ್ನ ದೆಹಲಿ-ಕಾಬೂಲ್-ದೆಹಲಿ ವಿಮಾನವನ್ನು ವಿಮಾನವನ್ನು ರದ್ದುಗೊಳಿಸಿದೆ ಎಂದು ಹಿರಿಯ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.