ವಾಷಿಂಗ್ಟನ್: ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಎಂದು ಕಮಲಾ ಹ್ಯಾರಿಸ್ ಅವರು ಇಂದು (ಶನಿವಾರ) ಉಮೇದುವಾರಿಕೆ ಸಲ್ಲಿಸಿದ್ದಾರೆ.
ಉಮೇದುವಾರಿಕೆ ಸಲ್ಲಿಕೆ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಇಂದು ನಾನು ಅಮೆರಿಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಉಮೇದುವಾರಿಕೆ ಅಧಿಕೃತವಾಗಿ ಘೋಷಿಸುವ ಪತ್ರಗಳಿಗೆ ಸಹಿ ಹಾಕಿದ್ದೇನೆ. ಪ್ರತಿ ಮತ ಗಳಿಸಲು ಶ್ರಮಿಸುತ್ತೇನೆ. ನವೆಂಬರ್‌ನಲ್ಲಿ ನಮ್ಮ ಜನಶಕ್ತಿಯ ಅಭಿಯಾನ ಗೆಲ್ಲುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನವೆಂಬರ್ 5ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಕಮಲಾ ಹ್ಯಾರಿಸ್ ಅವರಿಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಪತ್ನಿ ಮಿಷೆಲ್ ಒಬಾಮ ಅವರು ಬೆಂಬಲ ಸೂಚಿಸಿದ್ದಾರೆ.
ಹಾಲಿ ಉಪಾಧ್ಯಕ್ಷೆಯಾಗಿರುವ ಕಮಲಾ ಅವರಿಗೆ ಒಬಾಮ ದಂಪತಿಯ ಬೆಂಬಲ ನಿರೀಕ್ಷಿತವೇ ಆಗಿತ್ತು. ಆದರೂ, ಡೆಮಾಕ್ರಟಿಕ್ ಪಕ್ಷದ ಇಬ್ಬರು ಜನಪ್ರಿಯ ನಾಯಕರ ಅಧಿಕೃತ ಅನುಮೋದನೆ ದೊರೆತಿರುವುದು ಅವರ ಬಲವನ್ನು ಹೆಚ್ಚಿಸಿದೆ ಎಂದು ವಿಶ್ಲೇಷಿಸಲಾಗಿದೆ.
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧದ ಸ್ಪರ್ಧೆಯಿಂದ ಅಧ್ಯಕ್ಷ ಜೋ ಬೈಡನ್ ಹಿಂದೆ ಸರಿದ ಬಳಿಕ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಲು ಕಮಲಾ ಹೆಸರು ಮುಂಚೂಣಿಯಲ್ಲಿತ್ತು.
ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಸಂಭವನೀಯ ಪ್ರತಿಸ್ಪರ್ಧಿಯಾಗಿರುವ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ವಿರುದ್ಧ ಟ್ರಂಪ್ ಅವರು ವಾಗ್ದಾಳಿ ಮುಂದುವರಿಸಿದ್ದಾರೆ.
‘ಕಮಲಾ ಅವರು ಆಯ್ಕೆಯಾದರೆ ಅಮೆರಿಕದ ಇತಿಹಾಸದಲ್ಲೇ ಕಟ್ಟಾ ಉದಾರವಾದಿ ಅಧ್ಯಕ್ಷೆ ಎನಿಸಲಿದ್ದಾರೆ’ ಎಂದು ಫ್ಲಾರಿಡಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಟೀಕಿಸಿದ್ದಾರೆ.
‘ಹ್ಯಾರಿಸ್ ಅವರು ಇಡೀ ಸಂಸತ್ತಿನಲ್ಲಿ ತೀವ್ರ ಎಡಪಂಥೀಯ ಧೋರಣೆಯುಳ್ಳ ಸೆನೆಟರ್‌ಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವರು. ಅವರು ಅಧ್ಯಕ್ಷೆಯಾಗಿ ಆಯ್ಕೆಯಾದರೆ ಎಡಪಂಥೀಯ ಧೋರಣೆಯುಳ್ಳ ನೂರಾರು ನ್ಯಾಯಾಧೀಶರನ್ನು ನೇಮಿಸುತ್ತಾರೆ. ಸ್ಯಾಸ್‌ಫ್ರಾನ್ಸಿಸ್ಕೊದಲ್ಲಿ ತಾವು ತಂದಿರುವ ಉದಾರವಾದಿ ನೀತಿಗಳನ್ನು ಇಡೀ ದೇಶದ ಮೇಲೆ ಬಲವಂತವಾಗಿ ಹೇರಲಿದ್ದಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.