ADVERTISEMENT

ಕಮಲಾ ಡೆಮಾಕ್ರಟಿಕ್‌ ಅಧ್ಯಕ್ಷೀಯ ಅಭ್ಯರ್ಥಿ; ಟ್ರಂಪ್‌ ನಡುವೆ ನೇರ ಸ್ಪರ್ಧೆ

ಅಮೆರಿಕ ಅಧ್ಯಕ್ಷೀಯ ಚುನಾವಣೆ

ಪಿಟಿಐ
Published 6 ಆಗಸ್ಟ್ 2024, 15:43 IST
Last Updated 6 ಆಗಸ್ಟ್ 2024, 15:43 IST
<div class="paragraphs"><p>ಕಮಲಾ ಹ್ಯಾರಿಸ್‌</p></div>

ಕಮಲಾ ಹ್ಯಾರಿಸ್‌

   

ವಾಷಿಂಗ್ಟನ್‌: ಭಾರತ ಮೂಲದ ಅಮೆರಿಕ ಉಪಾಧ್ಯಕ್ಷೆ, ಕಮಲಾ ಹ್ಯಾರಿಸ್‌ ಅವರು ಮುಂದಿನ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಮಂಗಳವಾರ ನಾಮನಿರ್ದೇಶನಗೊಂಡಿದ್ದಾರೆ. ಆ ಮೂಲಕ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಇಲ್ಲಿನ ಅಧ್ಯಕ್ಷ ಸ್ಥಾನಕ್ಕೆ ಮೊಟ್ಟ ಮೊದಲ ಸಲ ನಾಮನಿರ್ದೇಶನಗೊಂಡಂತಾಗಿದೆ.

59 ವರ್ಷದ ಹ್ಯಾರಿಸ್‌ ಅವರು ಅಮೆರಿಕ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್‌ ಅಧ್ಯಕ್ಷೀಯ ಅಭ್ಯರ್ಥಿ 78 ವರ್ಷದ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಇದೇ ನವೆಂಬರ್‌ ತಿಂಗಳಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸೆಣಸಲಿದ್ದಾರೆ.

ADVERTISEMENT

ಕಳೆದ ಶುಕ್ರವಾರ ವರ್ಚುವಲ್‌ ವಿಧಾನದ ಮೂಲಕ ನಡೆದ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಡೆಮಾಕ್ರಟಿಕ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವುದಕ್ಕೆ ಅಗತ್ಯವಿರುವಷ್ಟು ಮತಗಳನ್ನು ಕಮಲಾ ಹ್ಯಾರಿಸ್‌ ಪಡೆದಿದ್ದರು. 

‘ಅಮೆರಿಕದ ಅಧ್ಯಕ್ಷೀಯ ಸ್ಥಾನಕ್ಕೆ ಡೆಮಾಕ್ರಟಿಕ್‌ ಪಕ್ಷದಿಂದ ನಾಮನಿರ್ದೇಶನಗೊಂಡಿರುವುದಕ್ಕೆ ಸಂತೋಷವಾಗಿದೆ. ಮುಂದಿನ ವಾರ ಅಧಿಕೃತ ನಾಮನಿರ್ದೇಶನವನ್ನು ಸ್ವೀಕರಿಸುತ್ತೇನೆ. ಈ ಅಭಿಯಾನದ ಮೂಲಕ ಜನರ ಅಭಿಮಾನದಿಂದ ಉತ್ತೇಜಿತನಾಗಿದ್ದು, ಅತ್ಯುತ್ತಮ ಆಯ್ಕೆಯಾಗಿ ಹೋರಾಟ ಮುಂದುವರಿಯಲಿದೆ’ ಎಂದು ಹ್ಯಾರಿಸ್‌ ತಿಳಿಸಿದರು.

ಅಮೆರಿಕದಾದ್ಯಂತ ಡೆಮಾಕ್ರಟಿಕ್‌ ಪಕ್ಷದ 4,567 ಪ್ರತಿನಿಧಿಗಳು ಮತ ಚಲಾಯಿಸಿದ್ದು, ಈ ಪೈಕಿ ಹ್ಯಾರಿಸ್‌ ಶೇ 99ರಷ್ಟು ಮತಗಳು ಬಿದ್ದಿವೆ. 

ಉಪಾಧ್ಯಕ್ಷ ಸ್ಥಾನಕ್ಕೆ ಟಿಮ್ ವಾಲ್ಜ್‌ ಸ್ಪರ್ಧೆ: ಉಪಾಧ್ಯಕ್ಷ ಸ್ಥಾನಕ್ಕೆ ಮಿನ್ನೆಸೋಟಾ ಗವರ್ನರ್‌ ಟಿಮ್‌ ವಾಲ್ಜ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಘೋಷಿಸಿದ್ದಾರೆ. 

ಈ ಕುರಿತಂತೆ ಬೆಂಬಲಿಗರಿಗೆ ಸಂದೇಶ ಕಳುಹಿಸಿ, ಈ ವಿಷಯ ಖಚಿತಪಡಿಸಿದ್ದಾರೆ.

60 ವರ್ಷದ ವಾಲ್ಜ್‌ ಅವರು ಅಮೆರಿಕ ಸೇನೆಯ ನಿವೃತ್ತ ಅಧಿಕಾರಿಯಾಗಿದ್ದು, ಶಿಕ್ಷಕರಾಗಿಯೂ ಕೆಲಸ ಮಾಡಿದ್ದಾರೆ. 2018ರಲ್ಲಿ ಮಿನ್ನೆಸೋಟಾ ಗವರ್ನರ್‌ ಆಗಿದ್ದಾರೆ. ಗ್ರಾಮೀಣ ಹಾಗೂ ಬಿಳಿ ಮತದಾರರನ್ನು ಸೆಳೆಯುವ ದೃಷ್ಟಿಯಿಂದಲೇ ಕಮಲಾ ಹ್ಯಾರಿಸ್‌ ಇವರ ಆಯ್ಕೆ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಟಿಮ್‌ ವಾಲ್ಜ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.