ವಾಷಿಂಗ್ಟನ್: ಅಮೆರಿಕದ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಮಿನ್ನೆಸೊಟಾದ ಗವರ್ನರ್ ಟಿಮ್ ವಾಲ್ಜ್ ಅವರ ಹೆಸರನ್ನು ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅಂತಿಮಗೊಳಿಸಿದ್ದಾರೆ.
ಪ್ರಗತಿಪರ ನೀತಿ ನಿರೂಪಕ ಎಂದೇ ಗುರುತಿಸಿಕೊಂಡಿರುವ ಟಿಮ್ ಅವರು ಮೃದುಭಾಷಿ. ಅಮೆರಿಕದ ಹೃದಯ ಭಾಗಕ್ಕೆ ಸೇರಿದ ಇವರ ಆಯ್ಕೆಯ ಮೂಲಕ ಗ್ರಾಮೀಣ ಹಾಗೂ ಬಿಳಿಯರ ಮತಗಳನ್ನು ಪಡೆಯುವ ಲೆಕ್ಕಾಚಾರ ಡೆಮಾಕ್ರೆಟಿಕ್ ಪಕ್ಷ ಹೊಂದಿದೆ ಎಂದೆನ್ನಲಾಗಿದೆ.
60 ವರ್ಷದ ವಾಲ್ಜ್ ಅವರು ಅಮೆರಿಕದ ರಾಷ್ಟ್ರೀಯ ಸೇನೆಯ ಮಾಜಿ ಯೋಧ, ಶಿಕ್ಷಕರೂ ಆಗಿದ್ದವರು. 2006ರಲ್ಲಿ ಅಮೆರಿಕದ ಹೌಸ್ ಆಫ್ ರೆಪ್ರಸೆಂಟಿಟೀವ್ಸ್‌ಗೆ ಆಯ್ಕೆಯಾದ ಇವರು ಅಲ್ಲಿ 12 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ಮಿನ್ನೆಸೊಟಾದ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ.
ಶಾಲಾಮಕ್ಕಳಿಗೆ ಉಚಿತ ಊಟ, ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ನಿರ್ದಿಷ್ಟ ಗುರಿ, ಮಧ್ಯಮ ವರ್ಗದವರ ಮೇಲಿನ ಹೊರೆ ತಪ್ಪಿಸಲು ತೆರಿಗೆ ಕಡಿತ, ವೇತನ ಸಹಿತ ರಜೆಯ ಸಂಖ್ಯೆ ಹೆಚ್ಚಳದಂತ ಕಾನೂನುಗಳನ್ನು ಟಿಮ್ ಜಾರಿಗೆ ತಂದಿದ್ದಾರೆ.
‘ಮಹಿಳೆಯರು ಗರ್ಭ ಧರಿಸುವ ಹಕ್ಕುಗಳ ಕುರಿತು ಬಹಳಾ ದೀರ್ಘಕಾಲದಿಂದ ಟಿಮ್ ಧ್ವನಿ ಎತ್ತಿದ್ದಾರೆ. ಆದರೆ ಕೃಷಿ ಕ್ಷೇತ್ರ ಮತ್ತು ಬಂದೂಕು ಪರವಾನಗಿಯ ವಿಷಯದಲ್ಲಿ ಅಮೆರಿಕದ ಸಂಪ್ರದಾಯವಾದಿಗಳತ್ತ ಟಿಮ್ ವಾಲಿದ್ದಾರೆ’ ಎಂದು ವರದಿ ಹೇಳಿದೆ.
ಜಮೈಕಾ ಹಾಗೂ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿದ್ದಾರೆ. ರಿಪಬ್ಲಿಕನ್ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪರ್ಧಿಸಿದ್ದಾರೆ. ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಜೆ.ಡಿ. ವೇನ್ಸ್ ಸ್ಪರ್ಧಿಸಿದ್ದಾರೆ.
2016ರ ಚುನಾವಣೆಯಲ್ಲಿ ಟ್ರಂಪ್ ಅವರಿಗೆ ಗ್ರಾಮೀಣ ಭಾಗದಿಂದ ಶೇ 59ರಷ್ಟು ಮತಗಳು ಬಂದಿದ್ದವು. 2020ರಲ್ಲಿ ಇದು ಶೇ 65ಕ್ಕೆ ಹೆಚ್ಚಳವಾದರೂ, ಅವರು ಪರಾಭವಗೊಂಡರು.
2022ರಲ್ಲಿ ನಡೆದ ಮಿನ್ನೆಸೊಟಾ ಗವರ್ನರ್ ಚುನಾವಣೆಯಲ್ಲಿ ಟಿಮ್ ಅವರು ಶೇ 52.27ರಷ್ಟು ಮತ ಪಡೆದಿದ್ದರು. ರಿಪಬ್ಲಿಕನ್ ಪಕ್ಷದ ಅವರ ಪ್ರತಿಸ್ಪರ್ಧಿ ಶೇ 44.61ರಷ್ಟು ಮತಗಳನ್ನು ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.