ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಅಮೆರಿಕದಲ್ಲಿ 4.4 ಮಿಲಿಯನ್ (44 ಲಕ್ಷ) ಭಾರತ ಮೂಲದ ಅಮೆರಿಕನ್ನರ ಭರವಸೆ ಮತ್ತು ಪ್ರಾತಿನಿಧ್ಯದ ಸಂಕೇತವಾಗಿದ್ದಾರೆ ಎಂದು ಭಾರತ ಸಂಜಾತ, ಡೆಮಾಕ್ರಟಿಕ್ ಪಕ್ಷದ ಮುಖ್ಯ ನಿಧಿ ಸಂಗ್ರಹಕಾರ ಅಜಯ್ ಜೈನ್ ಭುಟೋರಿಯಾ ಹೇಳಿದ್ದಾರೆ.
ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ 59 ವರ್ಷದ ಕಮಲಾ ಹ್ಯಾರಿಸ್ ಕಣಕ್ಕಿಳಿದಿದ್ದಾರೆ. ಭಾರತ ಮೂಲದ ಅಮೆರಿಕನ್ನರಿಂದ ಹ್ಯಾರಿಸ್‌ಗೆ ಸಂಪೂರ್ಣ ಬೆಂಬಲ ಸಿಗಲಿದ್ದು, ಇದು ಉತ್ತಮ ಫಲಿತಾಂಶಕ್ಕೆ ಸಾಕ್ಷಿಯಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
‘ಕಮಲಾ ಹ್ಯಾರಿಸ್ ಅವರ ತಾಯಿ ಚೆನ್ನೈ ಮೂಲದವರಾಗಿದ್ದಾರೆ. ಅವರು (ಕಮಲಾ) ಕೇವಲ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರದೆ 44 ಲಕ್ಷ ಭಾರತ ಮೂಲದ ಅಮೆರಿಕನ್ನರಿಗೆ ಭರವಸೆ ಮತ್ತು ಪ್ರಾತಿನಿಧ್ಯದ ಸಂಕೇತವಾಗಿರಲಿದ್ದಾರೆ. ಹಾಗಾಗಿ ಎಲ್ಲರ ಬೆಂಬಲದ ಅಗತ್ಯವಿದೆ’ ಎಂದು ಭುಟೋರಿಯಾ ಮನವಿ ಮಾಡಿದ್ದಾರೆ.
ಅಮೆರಿಕದಲ್ಲಿ ಪ್ರಭಾವಶಾಲಿಯಾಗಿರುವ ಭಾರತ ಮೂಲದ ಅಮೆರಿಕನ್ನರ ಸಮುದಾಯವು ಅಧ್ಯಕ್ಷೀಯ ಚುನಾವಣೆಯಲ್ಲಿ ವಿವಿಧ ರಾಜ್ಯಗಳ ಅಭ್ಯರ್ಥಿಗಳ ಗೆಲುವು ಮತ್ತು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ಭುಟೋರಿಯಾ ತಿಳಿಸಿದ್ದಾರೆ.
ಕಮಲಾ ಹ್ಯಾರಿಸ್ ಪರ ಒಂದೇ ವಾರದಲ್ಲಿ 20 ಕೋಟಿ ಡಾಲರ್ (₹1,674 ಕೋಟಿ) ದೇಣಿಗೆ ಸಂಗ್ರಹಿಸಲಾಗಿದೆ. ಇದು ಅವರ ಪರವಾಗಿ ಹೆಚ್ಚುತ್ತಿರುವ ಬೆಂಬಲವನ್ನು ಪ್ರತಿಬಿಂಬಿಸಿದೆ. ಈಗಾಗಲೇ ಪ್ರಚಾರ ಆರಂಭಿಸಿರುವ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ನಾಯಕರನ್ನು ಒಟ್ಟುಗೂಡಿಸಿದ್ದಾರೆ ಎಂದು ಭುಟೋರಿಯಾ ವಿಶ್ಲೇಷಿಸಿದ್ದಾರೆ.
ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣದಲ್ಲಿದ್ದಾರೆ.
ಕಮಲಾ ಹ್ಯಾರಿಸ್ ಗೆಲ್ಲಬಾರದು ಎಂಬುದಕ್ಕೆ ಯಾವುದೇ ಕಾರಣವಿಲ್ಲ. ಇದು ಗಂಭೀರ ಸಂದರ್ಭ. ಟ್ರಂಪ್ ಅವರು ದೇಶವನ್ನು ನಿರಂಕುಶವಾದದತ್ತ ಒಯ್ಯುವುದನ್ನು ತಡೆಯುವ ವ್ಯಕ್ತಿ ಅವರಾಗಿದ್ದಾರೆ.ಸಲ್ಮಾನ್ ರಷ್ದಿ ಮುಂಬೈ ಮೂಲದ ಲೇಖಕ
ಅಮೆರಿಕದಲ್ಲಿ ಪ್ರಜಾಪ್ರಭುತ್ವ ಬಲಪಡಿಸುವುದು ಅಮೆರಿಕನ್ನರಿಗೆ ಅವಕಾಶಗಳನ್ನು ಸೃಷ್ಟಿಸುವುದು ಸೇರಿ ಅನೇಕ ಸವಾಲುಗಳಿವೆ. ಅಧ್ಯಕ್ಷ ಸ್ಥಾನಕ್ಕೆ ನಾನು ಕಮಲಾ ಹೆಸರನ್ನು ಅನುಮೋದಿಸುತ್ತೇನೆ.ಅಲ್ ಗೋರ್ ಮಾಜಿ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.