ಕರಾಚಿ: ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್)ನ ಉಪಾಧ್ಯಕ್ಷೆ ಮರಿಯಮ್ ನವಾಜ್ ಅವರು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಮತ್ತೆ ಅಧಿಕಾರಕ್ಕೆ ತರುವುದಾಗಿಯೂ ಮತ್ತು ಹಾಲಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿಗೆ ಕಳುಹಿಸುವುದಾಗಿಯೂ ಭಾನುವಾರ ಪ್ರತಿಜ್ಞೆ ಮಾಡಿದ್ದಾರೆ.
ಭಾನುವಾರ ಕರಾಚಿಯಲ್ಲಿ ಸರ್ಕಾರದ ವಿರುದ್ಧ ನಡೆದ 11 ವಿರೋಧ ಪಕ್ಷಗಳ ಸಮಾವೇಶದಲ್ಲಿ ಮಾತನಾಡಿರುವ ಷರೀಪ್ ಪುತ್ರಿ ಮರಿಯಮ್, ‘ಕೋವಿಡ್ 19 ಸಾಂಕ್ರಾಮಿಕದ ಮಧ್ಯೆಯೂ ಹಲವು ಪ್ರಯತ್ನಗಳನ್ನು ಮಾಡುತ್ತಿರುವ ರಾಜ್ಯ ಸರ್ಕಾರಗಳನ್ನು ಕೊಂಡಾಡಿದರು. ಆದರೆ ಪ್ರಾಂತೀಯ ಸರ್ಕಾರಗಳು ಕೇಂದ್ರ ಸರ್ಕಾರದಿಂದ ಅವಮಾನಗಳಿಗೆ ಗುರಿಯಾಗಿವೆ,’ ಎಂದು ಮರಿಯಮ್ ಹೇಳಿರುವುದಾಗಿ ಪಾಕಿಸ್ತಾನದ ಮಾಧ್ಯಮ ಸಂಸ್ಥೆ ಡಾನ್ ವರದಿ ಮಾಡಿದೆ.
ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಮತ್ತೆ ಅಧಿಕಾರಕ್ಕೆ ತರುವ ಮತ್ತು ಇಮ್ರಾನ್ ಖಾನ್ ಅವರನ್ನು ಜೈಲಿಗೆ ಅಟ್ಟುವ ಪ್ರತಿಜ್ಞೆಯನ್ನು ಮರಿಯಮ್ ಇದೇ ಸಮಾವೇಶದಲ್ಲಿ ಮಾಡಿದರು.
ವಿರೋಧ ಪಕ್ಷದ ನಾಯಕರನ್ನು ಮತ್ತು ತಮ್ಮ ತಂದೆ ಷರೀಫ್ ಅವರನ್ನು ‘ದೇಶದ್ರೋಹಿ’ ಎಂದು ಕರೆದಿದ್ದಕ್ಕಾಗಿ ಮರಿಯಮ್ ನವಾಜ್ ಅವರು ಇಮ್ರಾನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಪ್ರಶ್ನೆ ಕೇಳುವವರನ್ನು ನೀವು ದೇಶದ್ರೋಹಿಗಳು ಎಂದು ಕರೆಯುವಿರಿ. ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ನೀವು ಸೇನೆಯ ಹಿಂದೆ ಅಡಗಿಕೊಳ್ಳುವಿರಿ. ದೇಶದ ಸಂಸ್ಥೆಗಳನ್ನು ನಿಮ್ಮ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡಿರುವಿರಿ,’ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ತನಿಖಾ ಸಂಸ್ಥೆ, ಕೇಂದ್ರ ಆದಾಯ ಇಲಾಖೆ ಸೇರಿದಂತೆ ಹಲವು ಸಂಸ್ಥೆಗಳನ್ನು ನವಾಜ್ ನಿಯಂತ್ರಣ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
‘ಯಾರೋ ಒಂದಿಬ್ಬರು ಇಡೀ ಸಂಸ್ಥೆಯಾಗಲು ಸಾಧ್ಯವಿಲ್ಲ. ಆದರೆ ಒಬ್ಬರು ಅಥವಾ ಇಬ್ಬರು ಇಡೀ ಸಂಸ್ಥೆಯ ಹೆಸರನ್ನೇ ಕೆಡಿಸಬಹುದು. ಅಂಥವರು ಸಂಸ್ಥೆಗಳ ಅಧಿಕಾರ ಹಿಡಿದಾಗ ಸಂಸ್ಥೆಗೆ ಭಾರಿ ನಷ್ಟವಾಗುತ್ತದೆ,’ ಎಂದು ಅವರು ಹೇಳಿದರು.
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಿಎಂಎಲ್–ಎನ್ ಪಾರ್ಟಿ ವರಿಷ್ಠ ನವಾಜ್ ಷರೀಫ್ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ವೈದ್ಯಕೀಯ ಚಿಕಿತ್ಸೆಗೆಂದು ಲಂಡನ್‌ಗೆ ತೆರಳಿದ್ದರು. ಅಂದಿನಿಂದ ಷರೀಫ್ ಲಂಡನ್‌ನಲ್ಲಿ ವಾಸವಾಗಿದ್ದಾರೆ.
ನವಾಜ್ ಷರೀಫ್ ಹಸ್ತಾಂತರಕ್ಕಾಗಿ ಇಮ್ರಾನ್ ಖಾನ್ ಹೊಸ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಸಮಿತಿಯು ಸಚಿವರಾದ ಶಾ ಮೆಹಮೂದ್ ಖುರೇಷಿ, ಅಸಾದ್ ಉಮ್ಮರ್, ಫಾವದ್ ಚೌಧರಿ, ಶಫ್ಕತ್ ಮಹಮೂದ್ ಮತ್ತು ಪರ್ವೇಜ್ ಖಟ್ಟಕ್ ಅವರನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.