ನೈರೋಬಿ: ಕೆನ್ಯಾದ ಲೈಂಗಿಕ ಅಲ್ಪಸಂಖ್ಯಾತರ (ಎಲ್‌ಜಿಬಿಟಿಕ್ಯು) ಹಕ್ಕುಗಳ ಹೋರಾಟಗಾರ, ಫ್ಯಾಷನ್ ಡಿಸೈನರ್ ಮತ್ತು ಮಾಡೆಲ್ ಎಡ್ವಿನ್ ಚಿಲೋಬಾ ಅವರ ಮೃತದೇಹ ರಸ್ತೆಯಲ್ಲಿ ಬಿದ್ದದ್ದ ಲೋಹದ ಪೆಟ್ಟಿಗೆಯಲ್ಲಿ ಬುಧವಾರ ಪತ್ತೆಯಾಗಿದೆ. ಕೆನ್ಯಾ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
25 ವರ್ಷ ಪ್ರಾಯದ ಎಡ್ವಿನ್ ಚಿಲೋಬಾ ಅವರ ಮೃತದೇಹವಿದ್ದ ಪಟ್ಟಿಗೆಯನ್ನು ಕೆಲ ಅಪರಿಚಿತರು ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ತಂದು ಎಸೆದು ಹೋಗಿದ್ದಾರೆ ಎನ್ನಲಾಗಿದೆ. ಕೊಲೆ ಹಿಂದಿನ ಕಾರಣ ಇನ್ನು ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಲೋಬಾ ಅವರು ಎಲ್‌ಜಿಬಿಟಿಕ್ಯು ಹಕ್ಕುಗಳ ಹೋರಾಟಗಾರರಾಗಿದ್ದು, ಅವರ ಚಟುವಟಿಕೆಗಳನ್ನು ಸಹಿಸದವರು ದಾಳಿ ಮಾಡಿ, ಕೊಂದು ಹಾಕಿರಬಹುದು ಎಂದು ಅವರ ಸ್ನೇಹಿತ ಡೆನಿಸ್ ಎನ್ಜಿಯೋಕಾ ಹೇಳಿದ್ದಾರೆ.
ಕ್ರಿಶ್ಚಿಯನ್ ಸಂಪ್ರದಾಯವಾದಿ ರಾಷ್ಟ್ರ ಕೆನ್ಯಾದಲ್ಲಿ ಅನಿಶ್ಚಿತತೆ ಎದುರಿಸುತ್ತಿರುವ ಲೈಂಗಿಕ ಅಲ್ಪಸಂಖ್ಯಾತರು, ನಿರಂತರ ದಾಳಿಗೀಡಾಗಿದ್ದಾರೆ. ಈ ಪ್ರಕರಣಗಳ ತ್ವರಿತ ತನಿಖೆ ನಡೆಸಬೇಕು ಎಂದು ಎಲ್‌ಜಿಬಿಟಿಕ್ಯು ಹಕ್ಕುಗಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಕೆನ್ಯಾ ಮತ್ತು ಆಫ್ರಿಕಾದಾದ್ಯಂತ ಸಲಿಂಗಕಾಮವನ್ನು ನಿಷೇಧಿಸಲಾಗಿದೆ. ಸಲಿಂಗಿಗಳ ವಿಷಯದಲ್ಲಿ ಈ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ತಾರತಮ್ಯ ಧೋರಣೆ ಅನುಸರಿಸಲಾಗುತ್ತದೆ. ಹೀಗಾಗಿ ಈ ಸಮುದಾಯ ನಿರಂತರ ಕಿರುಕುಳ ಎದುರಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.