ವಾಷಿಂಗ್ಟನ್(ಪಿಟಿಐ): ‘ದಿ ಕೇರಳ ಸ್ಟೋರಿ’ ಚಿತ್ರವು ಅಮೆರಿಕ ಹಾಗೂ ಕೆನಡಾದ 200 ಚಿತ್ರಮಂದಿರಗಳಲ್ಲಿ ಶುಕ್ರವಾರ ಬಿಡುಗಡೆಯಾಗಿದ್ದು, ‘ಸಿನಿಮಾದ ಸೃಜನಶೀಲ ಗಡಿಗಳನ್ನು ಮೀರಿದ ಚಿತ್ರ ಇದಾಗಿದೆ’ ಎಂದು ಚಿತ್ರದ ನಿರ್ದೇಶಕ ಸುದಿಪ್ತೊ ಸೇನ್ ಅವರು ಬಣ್ಣಿಸಿದ್ದಾರೆ.
ಇಂಪ್ಯಾಕ್ಟ್ ಅಡ್ವೈಸರ್ ಪ್ರಿಯಾ ಸಾವಂತ್ ಹಾಗೂ ವಿಜಯ್ ಪಲ್ಲೊದ್ ಅವರು ಆಯೋಜಿಸಿದ್ದ ವರ್ಚ್ಯುಯಲ್ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಸೇನ್, ‘ಕೇರಳದಲ್ಲಿ ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ ಈ ಸಮಸ್ಯೆಯನ್ನು ನಿರಾಕರಿಸಲಾಗುತ್ತಿತ್ತು. ಈ ಚಿತ್ರವು ಜಗತ್ತಿನ ಎಲ್ಲ ಸಮುದಾಯಗಳಿಗೂ ತಲುಪಿ ಜಾಗೃತಿ ಮೂಡಿಸುವ ಒಂದು ಚಳವಳಿಯಾಗಿದೆ’ ಎಂದು ಅವರು ತಿಳಿಸಿದರು.
‘ಈ ಚಿತ್ರದಲ್ಲಿರುವ ವಿಷಯವನ್ನು ಮುಚ್ಚಿಡಲಾಗಿತ್ತು. ಆದರೆ, ಎಲ್ಲರಿಗೂ ತಿಳಿಸುವಂತಹ ಕಥಾವಸ್ತುವನ್ನು ಈ ಚಿತ್ರ ಹೊಂದಿದೆ. ಆದ್ದರಿಂದ ಈ ವಿಷಯದ ಕುರಿತು ಚರ್ಚಿಸಲು ನಾವು ಈ ಚಿತ್ರವನ್ನು ನಿರ್ಮಿಸಿದ್ದೇವೆ’ ಎಂದು ಚಿತ್ರದ ನಿರ್ಮಾಪಕರಾದ ವಿಪುಲ್ ಶಾ ಹೇಳಿದರು.
ಮೂವರು ಯುವತಿಯರು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿ, ಐಎಸ್‌ಗೆ ಸೇರುವ ಕಥಾವಸ್ತುವನ್ನು ದಿ ಕೇರಳ ಸ್ಟೋರಿ ಚಿತ್ರ ಹೊಂದಿದೆ.
‘ಪ್ರಾಮಾಣಿಕ ಹಾಗೂ ಸತ್ಯದಿಂದ ಕೂಡಿದ ಈ ಚಿತ್ರಕ್ಕೆ ಆರಂಭದಲ್ಲಿ ಯಾರ ಸಹಕಾರವೂ ದೊರೆತಿರಲಿಲ್ಲ. ಆದರೆ, ಈಗ ಆರು ದಿನಗಳಲ್ಲೇ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಯಶಸ್ಸು ಕಂಡಿದ್ದು ಜಗತ್ತಿನಾದ್ಯಂತ ತೆರೆ ಕಂಡಿದೆ’ ಎಂದು ವಿಪುಲ್ ಶಾ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.