ADVERTISEMENT

ಸಿರಿಸೇನಾ ನಿರ್ಧಾರ ಪ್ರಶ್ನಿಸಿ ‘ಸುಪ್ರೀಂ’ ಮೊರೆ

ಪಿಟಿಐ
Published 12 ನವೆಂಬರ್ 2018, 16:31 IST
Last Updated 12 ನವೆಂಬರ್ 2018, 16:31 IST

ಕೊಲಂಬೊ: ಅವಧಿಗಿಂತ ಮೊದಲೇ ಸಂಸತ್ತನ್ನು ವಿಸರ್ಜಿಸಿದ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನಿರ್ಧಾರವನ್ನು ಪ್ರಶ್ನಿಸಿ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಆಯೋಗದ ಸದಸ್ಯರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ಪದಚ್ಯುತ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಯುನೈಟೆಡ್ ನ್ಯಾಷನಲ್ ಪಾರ್ಟಿ, ಪ್ರಮುಖ ಪ್ರತಿಪಕ್ಷ ತಮಿಳ್ ನ್ಯಾಷನಲ್ ಅಲಯೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ ಸೇರಿದಂತೆ 10 ಪಕ್ಷಗಳು ಅರ್ಜಿ ಸಲ್ಲಿಸಿವೆ. ಚುನಾವಣಾ ಆಯೋಗದ ಸದಸ್ಯ ಪ್ರೊ. ರತ್ನಜೀವನ ಹೂಲೆ ಅವರೂ ಸಿರಿಸೇನಾ ಕ್ರಮ ಸಮರ್ಥನೀಯವಲ್ಲ ಎಂದು ವಾದಿಸಿದ್ದಾರೆ.

ಅಕ್ಟೋಬರ್ 9ರಂದು ಸಂಸತ್ ವಿಸರ್ಜಿಸಿದ್ದ ಸಿರಿಸೇನಾ, ಚುನಾವಣೆ ಘೋಷಿಸಿದ್ದರು. ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿ, ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಿಸಿದ್ದರು.

ADVERTISEMENT

ಸಂಸತ್ತಿನ 225 ಸದಸ್ಯರ ಪೈಕಿ 113 ಸದಸ್ಯರ ಬೆಂಬಲವನ್ನು ರಾಜಪಕ್ಸೆ ಅವರು ಸಾಬೀತುಪಡಿಸಬೇಕಿದೆ.

ನವೆಂಬರ್ 14ರಂದು ಬಹುಮತ ಸಾಬೀತು ಪರೀಕ್ಷೆ ನಿಗದಿಯಾಗಿದೆ. ಅಂದು ಸಂಸದರ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಸಿರಿಸೇನಾ ಹೇಳಿಕೆ ನೀಡಿದ್ದಾರೆ. ಸಂಸತ್ ವಿಸರ್ಜನೆಯ ತಮ್ಮ ನಡೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.