ಸೋಲ್: ‘ಕೋವಿಡ್ -19 ವಿರುದ್ಧ ದೇಶ ಹೋರಾಡುತ್ತಿದ್ದಾಗಲೇ ನನ್ನ ಸೋದರ ಅಧಿಕ ಜ್ವರದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು’ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್-ಉನ್ ಕಿರಿಯ ಸಹೋದರಿ ಕಿಮ್ ಯೋ-ಜಾಂಗ್ ಬಹಿರಂಗಪಡಿಸಿದ್ದಾರೆ.
ಸಾಂಕ್ರಾಮಿಕ ರೋಗ ವಿರೋಧಿ ಕ್ರಮಗಳ ಕುರಿತು ಬುಧವಾರ ನಡೆದ ರಾಷ್ಟ್ರೀಯ ಸಭೆಯಲ್ಲಿ ಅವರು ಮಾತನಾಡಿದರು. ’ದೇಶದಲ್ಲಿ ಕೋವಿಡ್ -19 ಅನ್ನು ನಿಯಂತ್ರಿಸುವ ತುರ್ತು ಅಭಿಯಾನದಲ್ಲಿ ಕಿಮ್ ಜಾಂಗ್ ಉನ್ ಜಯಶಾಲಿಯಾಗಿದ್ದಾರೆ’ ಎಂದು ಅವರು ಇದೇ ವೇಳೆ ಹೇಳಿದರು. ಈ ಬಗ್ಗೆ ಸರ್ಕಾರಿ ಸುದ್ದಿ ಮಾಧ್ಯಮ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಮೂರು ತಿಂಗಳ ಹಿಂದೆ ಉತ್ತರ ಕೊರಿಯಾದಲ್ಲಿ ಕೋವಿಡ್‌ನ ಮೊದಲ ಅಲೆ ಕಾಣಿಸಿಕೊಂಡಿತ್ತು.
ಉತ್ತರ ಕೊರಿಯಾದಲ್ಲಿ ಕಾಣಿಸಿಕೊಂಡ ಕೋವಿಡ್ ಅಲೆಗೆ ಕಿಮ್ ಯೋ ಜಾಂಗ್ ಅವರು ದಕ್ಷಿಣ ಕೊರಿಯವನ್ನು ದೂಷಿಸಿದರು. ದಕ್ಷಿಣ ಕೊರಿಯಾದಿಂದ ಆಕಾಶ ಮಾರ್ಗವಾಗಿ ಬಂದ ವಸ್ತುಗಳು ವೈರಸ್ ಸೋಂಕನ್ನು ಉತ್ತರ ಕೊರಿಯಾಕ್ಕೆ ಹರಡಿವೆ ಎಂದು ಅವರು ಆರೋಪಿಸಿದರು. ಈ ಬಗ್ಗೆ ಕೆಸಿಎನ್ಎ ವರದಿಯನ್ನು ಉಲ್ಲೇಖಿಸಿ ‘ಯೋನ್ಹಾಪ್ ನ್ಯೂಸ್ ಏಜೆನ್ಸಿ’ ಸುದ್ದಿ ಪ್ರಕಟಿಸಿದೆ.
ಕಿಮ್ ಸೋದರಿ ಕಿಮ್ ಯೋ ಜಾಂಗ್ ಅವರು ಉತ್ತರ ಕೊರಿಯಾದ ‘ವರ್ಕರ್ಸ್ ಪಾರ್ಟಿ’ಯ ಕೇಂದ್ರ ಸಮಿತಿಯ ಉಪಾಧ್ಯಕ್ಷರೂ ಆಗಿದ್ದಾರೆ.
‘ದಕ್ಷಿಣ ಕೊರಿಯಾದ ಗಡಿಯಲ್ಲಿ ಹಾರಿ ಬಂದ ಬಲೂನ್‌ಗಳಲ್ಲಿದ್ದ ವಸ್ತುಗಳಿಂದ ಸೋಂಕು ಹರಡಿದಿದೆ’ ಎಂದು ಉತ್ತರ ಕೊರಿಯಾ ಆರೋಪಿಸಿತ್ತು.
‘ದೇಶದ ಕೋವಿಡ್ ವಿರೋಧಿ ಹೋರಾಟದ ನಡುವೆಯೇ ಸೋದರ ಕಿಮ್ ಅಧಿಕ ಜ್ವರದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೂ ಸಾಂಕ್ರಾಮಿಕ ರೋಗದ ಪರಿಸ್ಥಿತಿ ನಿಭಾಯಿಸಲು ಕಿಮ್ ಶ್ರಮಿಸಿದರು’ ಎಂದು ಅವರು ಸೋದರನನ್ನು ಕೊಂಡಾಡಿದರು.
ಸಭೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಕಿಮ್ ಜಾಂಗ್ ಉನ್ ಅವರು, ‘ದೇಶವನ್ನು ಪ್ರವೇಶಿಸಿದ ಕೋವಿಡ್ ವಿರುದ್ಧ ಕೈಗೊಂಡ ಸಾಂಕ್ರಾಮಿಕ ವಿರೋಧಿ ಅಭಿಯಾನದಲ್ಲಿ ನಾವು ವಿಜಯ ಸಾಧಿಸಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.
ಜಗತ್ತಿನಾದ್ಯಂತ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡು ಎರಡು ವರ್ಷಗಳಾದರೂ ವೈರಸ್ ಮುಕ್ತ ರಾಷ್ಟ್ರ ಎಂದು ಘೋಷಿಸಿಕೊಂಡಿದ್ದ ಉತ್ತರ ಕೊರಿಯಾ, ಈ ವರ್ಷದ ಮೇ 12ರಂದು ತನ್ನ ಮೊದಲ ಕೋವಿಡ್ -19 ಪ್ರಕರಣವನ್ನು ಘೋಷಿಸಿತ್ತು.
ಉತ್ತರ ಕೊರಿಯಾದಲ್ಲಿ ಮೇ 15 ರಂದು 392,920 ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಜುಲೈ 29ರಿಂದ ಒಂದೂ ಪ್ರಕರಣ ಪತ್ತೆಯಾಗಿಲ್ಲ ಎನ್ನಲಾಗಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.