ದುಬೈ/ಕುವೈತ್: ಮಂಗಾಫ್‌ನ ಏಳು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 46 ಭಾರತೀಯರು ಸೇರಿ 50 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಕುವೈತ್‌ನಾದ್ಯಂತ ಅಕ್ರಮ ಕಟ್ಟಡಗಳಿಗೆ ಅಧಿಕಾರಿಗಳು ಕಡಿವಾಣ ಹಾಕಲು ಕಠಿಣ ಕ್ರಮ ಆರಂಭಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ಶನಿವಾರ ತಿಳಿಸಿದೆ.
ಅಗ್ನಿ ಅವಘಢದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಕುವೈತ್ ಮುನ್ಸಿಪಾಲಿಟಿಯು ಅಕ್ರಮ ಕಟ್ಟಡಗಳ ವಿರುದ್ಧ ಕಠಿಣ ಕ್ರಮವನ್ನು ಪ್ರಾರಂಭಿಸಿದೆ ಎಂದು ಅರಬ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ವೆಚ್ಚ ಕಡಿತಗೊಳಿಸಲು ಅತ್ಯಂತ ಅಸುರಕ್ಷಿತ ಜಾಗಗಳಲ್ಲಿ ವಲಸೆ ಕಾರ್ಮಿಕರನ್ನು ಇರಿಸುತ್ತಿರುವುದು, ಕಟ್ಟಡಗಳನ್ನು ಅನಧಿಕೃತವಾಗಿ ಮಾರ್ಪಡಿಸುತ್ತಿರುವುದು ಕುವೈತ್‌ನಲ್ಲಿ ಹಲವು ವರ್ಷಗಳಿಂದ ಪ್ರಮುಖ ಸಮಸ್ಯೆಯಾಗಿ ಮಾರ್ಪಟ್ಟಿದೆ. ಮಂಗಾಫ್ ಅಗ್ನಿ ದುರಂತ ಘಟನೆಯು ಕಟ್ಟಡಗಳ ಅನಧಿಕೃತ ಮಾರ್ಪಾಡುಗಳ ದೀರ್ಘಕಾಲದ ಈ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ್ದು, ಭವಿಷ್ಯದಲ್ಲಿ ಇಂತಹ ಅನಾಹುತಗಳು ಸಂಭವಿಸದಂತೆ ತಡೆಯಲು ಅಧಿಕಾರಿಗಳು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿಯನ್ನು ಸೃಷ್ಟಿಸಿದೆ.
ಗಾಯಾಳುಗಳ ಭೇಟಿ: ಗಾಯಗೊಂಡ 25 ಭಾರತೀಯರು ಚಿಕಿತ್ಸೆ ಪಡೆಯುತ್ತಿರುವ ಐದು ಆಸ್ಪತ್ರೆಗಳಿಗೆ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದೆ.
‘ಗಾಯಾಳುಗಳಲ್ಲಿ ಬಹುತೇಕರು ಈಗಾಗಲೇ ತಮ್ಮ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದಾರೆ’ ಎಂದು ಭಾರತದ ರಾಯಭಾರ ಕಚೇರಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಕಟ್ಟಡ ಕಾವಲುಗಾರನ ಕೊಠಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಕಾಣಿಸಿಕೊಂಡು, ಕಟ್ಟಡದ ಇತರೆಡೆಗೂ ಅದು ವ್ಯಾಪಿಸಿದ್ದರಿಂದ ದುರಂತ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ತನಿಖಾ ತಂಡ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.