ಕೀವ್: ರಾಜಧಾನಿ ಕೀವ್ ಪೂರ್ವದ ಉಪನಗರ ಬ್ರೊವರಿಯ ಕಿಂಡರ್‌ಗಾರ್ಟನ್ ಬಳಿ ಬುಧವಾರ ಹೆಲಿಕಾಪ್ಟರ್ ಅಪ್ಪಳಿಸಿ ಉಕ್ರೇನ್ ಗೃಹ ಸಚಿವ ಮತ್ತು ಪ್ರಾದೇಶಿಕ ಗವರ್ನರ್ ಅವರ ಮೂವರು ಮಕ್ಕಳು ಸೇರಿ 18 ಜನರು ಮೃತಪಟ್ಟಿದ್ದಾರೆ.
ಗೃಹ ಸಚಿವ ಡೆನಿಸ್ ಮೊನಾಸ್ಟಿರಸ್ಕಿ, ಉಪ ಸಚಿವ ಯೆವ್ಹೆನ್ ಯೆನಿನ್, ಸಚಿವಾಲಯದ ರಾಜ್ಯ ಕಾರ್ಯದರ್ಶಿ ಯೂರಿ ಲುಬ್ಕೊವಿಚ್, ಕೀವ್ ಪ್ರಾದೇಶಿಕ ಗವರ್ನರ್ ಒಲೆಕ್ಸಿ ಕುಲೆಬಾ ಅವರ ಮೂವರು ಮಕ್ಕಳು ಸಹ ಸಾವನ್ನಪ್ಪಿದ್ದಾರೆ.
ಈ ದುರಂತದಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ತುರ್ತು ಸೇವೆಗಳ ಒಂಬತ್ತು ಮಂದಿಯೂ ಮೃತಪಟ್ಟಿದ್ದಾರೆ. ದೇಶದ ಭದ್ರತಾ ಸೇವೆ ವಿಭಾಗವು ತನಿಖೆ ನಡೆಸುತ್ತಿದೆ ಎಂದು ಉಕ್ರೇನ್ ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥ ಐಹೋರ್ ಕ್ಲೈಮೆಂಕೊ ತಿಳಿಸಿದರು.
ಉಕ್ರೇನ್ ಪೊಲೀಸ್ ಮತ್ತು ಇತರ ತುರ್ತು ಸೇವೆಗಳ ಉಸ್ತುವಾರಿ ವಹಿಸಿದ್ದ ಮೊನಾಸ್ಟಿರಸ್ಕಿ ಅವರು, ರಷ್ಯಾ ಯುದ್ಧ ಆರಂಭಿಸಿದಾಗಿನಿಂದ ಸಾವನ್ನಪ್ಪಿದವರಲ್ಲಿ ಅತ್ಯಂತ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿ ಎನಿಸಿದ್ದಾರೆ.
ಈ ಘಟನೆ ಹವಾಮಾನ ವೈಪರೀತ್ಯ ಅಥವಾ ರಷ್ಯಾ ದಾಳಿಯಿಂದ ನಡೆದಿದೆಯೇ ಎನ್ನುವುದು ಈವರೆಗೆ ಸ್ಪಷ್ಟವಾಗಿಲ್ಲ. ಕೀವ್ ಪ್ರದೇಶದಲ್ಲಿ ಇತ್ತೀಚೆಗೆ ಉಭಯ ರಾಷ್ಟ್ರಗಳ ಸೇನೆಗಳ ನಡುವೆ ಯಾವುದೇ ಹೋರಾಟ ನಡೆದ ವರದಿಯಾಗಿಲ್ಲ.
15 ಮಕ್ಕಳು ಸೇರಿ 29 ಜನರು ಗಾಯಗೊಂಡಿರುವುದಾಗಿ ಈ ಮೊದಲು, ಅಧಿಕಾರಿಗಳು ಮತ್ತು ಮಾಧ್ಯಮ ವರದಿಗಳು ಮಾಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.