ADVERTISEMENT

ಪಾಕ್ ಚುನಾವಣೆ: ಬ್ಯಾಟ್ ಚಿಹ್ನೆ ಉಳಿಸಿಕೊಳ್ಳಲು ಕೋರಿದ್ದ ಇಮ್ರಾನ್ ಅರ್ಜಿ ವಜಾ

ಪಿಟಿಐ
Published 4 ಜನವರಿ 2024, 14:40 IST
Last Updated 4 ಜನವರಿ 2024, 14:40 IST
<div class="paragraphs"><p>ಇಮ್ರಾನ್ ಖಾನ್</p></div>

ಇಮ್ರಾನ್ ಖಾನ್

   

ಲಾಹೋರ್: ಮಾಜಿ ಪ್ರಧಾನಿ ಹಾಗೂ ಕ್ರಿಕೆಟರ್ ಇಮ್ರಾನ್ ಖಾನ್ ಅವರ ಪಾಕಿಸ್ತಾನ ತೆಹರೀಕ್‌ ಇ–ಇನ್ಸಾಫ್‌ (ಪಿಟಿಐ) ಪಕ್ಷವನ್ನು ಸಂವಿಧಾನ ಬಾಹಿರ ಎಂದಿರುವ ಅಲ್ಲಿನ ಚುನಾವಣಾ ಆಯೋಗವು, ಪಕ್ಷಕ್ಕೆ ನೀಡಿದ ಬ್ಯಾಟ್ ಚಿಹ್ನೆಯನ್ನು ಹಿಂಪಡೆದಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಲಾಹೋರ್ ಹೈಕೋರ್ಟ್‌ (LHC) ವಜಾಗೊಳಿಸಿದೆ.

ಪಿಟಿಐ ಪಕ್ಷದ ಆಂತರಿಕ ಚುನಾವಣೆಯನ್ನು ಡಿ. 22ರಂದು ಚುನಾವಣಾ ಆಯೋಗವು ತಿರಸ್ಕರಿಸಿ, ಪಕ್ಷಕ್ಕೆ ನೀಡಿದ್ದ ಬ್ಯಾಟ್ ಚಿಹ್ನೆಯನ್ನು ಹಿಂಪಡೆದಿತ್ತು. ಆ ಚುನಾವಣೆಯಲ್ಲಿ ಬ್ಯಾರಿಸ್ಟರ್‌ ಗೊಹರ್ ಖಾನ್ ಅವರು ಪಕ್ಷದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ADVERTISEMENT

ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರು ಪೇಶಾವರ ಹೈಕೋರ್ಟ್‌ನ ಆದೇಶವನ್ನು ಡಿ. 26ರಂದು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಪಕ್ಷದ ಆಂತರಿಕ ಚುನಾವಣೆಯನ್ನು ಕಾನೂನು ಬಾಹಿರ ಎಂದಿದ್ದ ಹಾಗೂ ಪಕ್ಷದ ಚಿಹ್ನೆಯನ್ನು ರದ್ದುಪಡಿಸಿದ್ದ ಚುನಾವಣಾ ಆಯೋಗದ ಕ್ರಮವನ್ನು ಇಮ್ರಾನ್ ಖಾನ್ ಪ್ರಶ್ನಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಪೇಶಾವರ ಹೈಕೋರ್ಟ್ ಚುನಾವಣಾ ಆಯೋಗದ ನಿರ್ಣಯವನ್ನು ಎತ್ತಿ ಹಿಡಿಯಿತು.

ಲಾಹೋರ್ ಹೈಕೋರ್ಟ್‌ನಲ್ಲಿ ಗುರುವಾರ ನಡೆದ ವಿಚಾರಣೆ ಸಂದರ್ಭದಲ್ಲಿ ಪಿಟಿಐ ವಕೀಲರು ಮನವಿ ಮಾಡಿ, ‘ಚುನಾವಣಾ ಆಯೋಗದ ಆದೇಶವನ್ನು ಹಿಂಪಡೆಯುವಂತೆ ಹಾಗೂ ಪಕ್ಷದ ಅಧಿಕೃತ ಅಂತರ್ಜಾಲ ತಾಣದಲ್ಲಿ ಪಿಟಿಐ ಆಂತರಿಕ ಚುನಾವಣೆಯ ಪ್ರಮಾಣಪತ್ರವನ್ನು ಪ್ರಕಟಿಸಲು ಅನುಮತಿ ನೀಡುವಂತೆ ಕೋರಿದರು.

‘ಬ್ಯಾಟ್ ಚಿಹ್ನೆಯನ್ನು ಕಾನೂನುಬಾಹಿರವಾಗಿ ಹಿಂಪಡೆಯಲಾಗಿದೆ. ಅದೂ ಅಲ್ಲದೆ, ಪಕ್ಷದ ಆಂತರಿಕ ಚುನಾವಣೆಯು ಆಯೋಗದ ವ್ಯಾಪ್ತಿಗೆ ಒಳಪಡದಿದ್ದರೂ, ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ಆಯೋಗವು ನ್ಯಾಯಾಲಯವಲ್ಲ. ಪಕ್ಷದೊಳಗಿನ ನೇಮಕಾತಿಗಳನ್ನು ಮತ್ತು ಆತಂರಿಕ ಚುನಾವಣೆಯನ್ನು ಪ್ರಶ್ನಿಸುವ ಹಕ್ಕು ಅದಕ್ಕಿಲ್ಲ’ ಎಂದು ಆರೋಪಿಸಿದರು.

‘ಪಕ್ಷದ ಅಭ್ಯರ್ಥಿಯನ್ನು ತಡೆಯುವ ನಿಟ್ಟಿನಲ್ಲಿ ಹಲವಾರು ತಂತ್ರಗಳನ್ನು ಹೆಣೆಯಲಾಗುತ್ತಿದೆ. ಈ ಮೊದಲು ನಾಮಪತ್ರ ಸಲ್ಲಿಸಲು ಅಡ್ಡಿಪಡಿಸಿದರು. ಈಗ ಪಕ್ಷದ ಚಿಹ್ನೆಯನ್ನೇ ಕಸಿದುಕೊಳ್ಳಲಾಗಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಪೇಶಾವರ ಹೈಕೋರ್ಟ್‌ನ ಆದೇಶದಿಂದಾಗಿ ಫೆ. 8ರಂದು ರಾಷ್ಟ್ರೀಯ ಸಂಸತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಪಿಟಿಐ ಪಕ್ಷದ ಅಭ್ಯರ್ಥಿಗಳು ಸ್ವತಂತ್ರ್ಯ ಅಭ್ಯರ್ಥಿಗಳಾಗಿ ಸ್ಪರ್ಧಿಸಬೇಕಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕ ಸದಸ್ಯ ಪೀಠವು ಪ್ರಕರಣ ಕುರಿತು ದ್ವಿಸದಸ್ಯ ಸಮಿತಿಯೊಂದನ್ನು ರಚಿಸಿದೆ. ಹೀಗಾಗಿ ಜ. 9ರಂದು ಪಿಟಿಐ ಪಕ್ಷದ ಭವಿಷ್ಯ ನಿರ್ಧಾರವಾಗಲಿದೆ ಎಂದೆನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.