ADVERTISEMENT

ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ಇಂದು ರಾಜೀನಾಮೆ ಸಾಧ್ಯತೆ

ಪಿಟಿಐ
Published 9 ಮೇ 2022, 7:04 IST
Last Updated 9 ಮೇ 2022, 7:04 IST
ಮಹಿಂದಾ ರಾಜಪಕ್ಸ
ಮಹಿಂದಾ ರಾಜಪಕ್ಸ    

ಕೊಲಂಬೊ: ಶ್ರೀಲಂಕಾದ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ತೀವ್ರ ಆರ್ಥಿಕ ಬಿಕ್ಕಟ್ಟಿನ ನಿವಾರಣೆಗಾಗಿ ಹೊಸ ಸರ್ಕಾರ ರಚನೆ ಮಾಡುವಂತೆ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಂದಾ ರಾಜಪಕ್ಸ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅಲ್ಲಿನ ರಾಜಕೀಯ ರಂಗದ ಮೂಲಗಳ ಮಾಹಿತಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಮಹಿಂದಾ ಅವರು ರಾಜೀನಾಮೆ ನೀಡಬೇಕು ಎಂದು ಒಂದೆಡೆ ಸ್ವಪಕ್ಷೀಯ (ಶ್ರೀಲಂಕಾ ಪೊದುಜನ ಪೆರಮುನ–ಎಸ್‌ಎಲ್‌ಪಿಪಿ) ನಾಯಕರೇ ಒತ್ತಡ ಹೇರಿದ್ದಾರೆ. ಆದರೆ, ಬೆಂಬಲಿಗರು ತಮ್ಮ ನಾಯಕ ರಾಜೀನಾಮೆ ನೀಡಬಾರದು ಎಂದು ಆಗ್ರಹಿಸುತ್ತಿದ್ದಾರೆ.

ADVERTISEMENT

ಮಹಿಂದಾ ರಾಜಪಕ್ಸ ಅವರ ತಮ್ಮ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಕೂಡ ರಾಜೀನಾಮೆ ಬಯಸಿದ್ದಾರಾದರೂ, ಈ ಬಗ್ಗೆ ನೇರವಾಗಿ ಅಣ್ಣನಿಗೆ ತಿಳಿಸಿಲ್ಲ. ಆದರೆ, ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ನಿವಾರಣೆಗಾಗಿ ‘ಐಕ್ಯತಾ ಸರ್ಕಾರ’ ರಚಿಸುವ ಸಲುವಾಗಿ ಅಣ್ಣನ ರಾಜೀನಾಮೆಯನ್ನು ಅವರು ಬಯಸಿರುವುದಾಗಿ ಮೂಲಗಳು ತಿಳಿಸಿವೆ.

ಹೀಗಿರುವಾಗಲೇ ಮಾತನಾಡಿರುವ ಮಿತ್ರಪಕ್ಷದ ಭಿನ್ನಮತೀಯ ನಾಯಕ ದಯಾಸಿರಿ ಜಯಶೇಖರ, ‘ಮಹಿಂದಾ ರಾಜಪಕ್ಸ ಅವರು ನೇರವಾಗಿ ರಾಜೀನಾಮೆ ನೀಡದಿರಬಹುದು. ಈಗಿನ ಬಿಕ್ಕಟ್ಟಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಹೇಳಬಹುದು. ರಾಜೀನಾಮೆ ನೀಡಲು ಯಾವುದೇ ಕಾರಣಗಳಿಲ್ಲ ಎಂದು ಪ್ರತಿಪಾದಿಸಬಹುದು. ಅಂತಿಮವಾಗಿ ನೀವು ಬಯಸಿದರೆ ನನ್ನನ್ನು ವಜಾ ಮಾಡಿ ಎಂದು ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಅಂಗಳಕ್ಕೆ ಚೆಂಡು ಎಸೆಯಬಹುದು’ ಎಂದು ಪಿಟಿಐಗೆ ತಿಳಿಸಿದ್ದಾರೆ.

ರಾಜೀನಾಮೆ ಒತ್ತಡಗಳ ಹೊರತಾಗಿಯೂ, ರಾಜಪಕ್ಸ ಸೋದರರು ಅಧಿಕಾರ ತೊರೆಯಲು ನಿರಾಕರಿಸಿದ್ದಾರೆ.

ರಾಜಪಕ್ಸ ಕುಟುಂಬದ ಹಿರಿಯಣ್ಣ, ಪ್ರಧಾನಿ ಮಹಿಂದಾ ರಾಜಪಕ್ಸ ಅವರು ಭಾನುವಾರ ಧಾರ್ಮಿಕ ಸ್ಥಳ ಅನುರಾಧಪುರಕ್ಕೆ ತೆರಳಿದ್ದಾಗ ಅಲ್ಲಿ ಸಾರ್ವಜನಿಕರಿಂದ ಪ್ರತಿಭಟನೆ ಎದುರಿಸಬೇಕಾಯಿತು. ಇಂಧನ, ಅಡುಗೆ ಅನಿಲಕ್ಕಾಗಿ ಜನ ಆಗ್ರಹಿಸಿದರು. ವಿದ್ಯುತ್ ಕಡಿತವನ್ನು ನಿಲ್ಲಿಸುವಂತೆ ಒತ್ತಾಯಿಸಿ ಘೇರಾವ್‌ ಹಾಕಿದರು.

ಇಡೀ ರಾಜಪಕ್ಸ ಕುಟುಂಬ ರಾಜಕೀಯ ತ್ಯಜಿಸಬೇಕು ಮತ್ತು ದೇಶದಿಂದ ಲೂಟಿ ಮಾಡಿರುವ ಆಸ್ತಿಯನ್ನು ಹಿಂದಿರುಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರಬಲ ಬೌದ್ಧ ಬಿಕ್ಕುಗಳು ಕೂಡ ಮಧ್ಯಂತರ ಸರ್ಕಾರ ರಚನೆಗೆ ಹಾದಿ ಮಾಡಿಕೊಡಬೇಕೆಂದು ರಾಜಪಕ್ಸ ಸೋದರರಿಗೆ ಆಗ್ರಹಿಸಿದ್ದು, ಅದಕ್ಕಾಗಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.