ಬ್ಯಾಂಕಾಕ್: ಥಾಯ್ಲೆಂಡ್‌ನ ಲಾವೋಸ್ ನಗರದ ಪೊಲೀಸರು ಏಷ್ಯಾದ ಅತಿದೊಡ್ಡ ಅಕ್ರಮ ಮಾದಕವಸ್ತು ಸಾಗಾಟ ದಂಧೆಯನ್ನು ಭೇದಿಸಿದ್ದಾರೆ. ಬಿಯರ್ ಟ್ರಕ್‌ನ ಹಿಂಭಾಗದಲ್ಲಿ ಇರಿಸಲಾಗಿದ್ದ 5.5 ಕೋಟಿ ಮೆಥಾಂಫೆಟಮೈನ್ ಮಾತ್ರೆಗಳನ್ನು ಪತ್ತೆ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಗುರುವಾರ ದೃಢಪಡಿಸಿದ್ದಾರೆ.
ಬುಧವಾರ ತಡರಾತ್ರಿ ವಶಪಡಿಸಿಕೊಂಡ 5.5 ಕೋಟಿ ಮೆಥ್ ಮಾತ್ರೆಗಳು ಮತ್ತು 1.5 ಟನ್ ಕ್ರಿಸ್ಟಲ್ ಮೆಥ್ ಈ ಪ್ರದೇಶದಲ್ಲಿ ಒಂದೇ ಬಾರಿಗೆ ವಶಕ್ಕೆ ಪಡೆದ ದಾಖಲೆಯ ಮಟ್ಟದ್ದಾಗಿದೆ ಎಂದು ವಿಶ್ವಸಂಸ್ಥೆಯ ಆಫೀಸ್ ಆಫ್ ಡ್ರಗ್ಸ್ ಅಂಡ್‌ಕ್ರೈಮ್‌ನ ಪ್ರಾದೇಶಿಕ ಪ್ರತಿನಿಧಿ ಜೆರೆಮಿ ಡೌಗ್ಲಾಸ್ ಹೇಳಿದ್ದಾರೆ.
‘ಇದು ಲಾವೋಸ್‌ನಲ್ಲೇ ಕಳೆದ ವರ್ಷ ವಶಪಡಿಸಿಕೊಂಡ ಮೆಥ್ ಮಾತ್ರೆಗಳ ಮೂರು ಪಟ್ಟು ಹೆಚ್ಚಾಗಿದೆ’ ಎಂದು ಡೌಗ್ಲಾಸ್ ಎಎಫ್‌ಪಿಗೆ ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಲಾವೋಸ್, ಮ್ಯಾನ್ಮಾರ್‌ನ ಶಾನ್ ರಾಜ್ಯದಿಂದ ಮೆಥ್ ಮಾತ್ರೆಗಳನ್ನು ಸಾಗಿಸುವ ಮಾದಕವಸ್ತು ಕಳ್ಳಸಾಗಣೆದಾರರಿಗೆ ಹೆಬ್ಬಾಗಿಲಾಗಿದೆ. ಫೆಬ್ರುವರಿಯಲ್ಲಿ ಆದ ಮ್ಯಾನ್ಮಾರ್ ದಂಗೆ ಬಳಿಕ ಡ್ರಗ್ಸ್ ಸಾಗಣೆ ವೇಗ ಪಡೆದುಕೊಂಡಿದೆ.
ಮ್ಯಾನ್ಮಾರ್, ಲಾವೋಸ್ ಮತ್ತು ಥೈಲ್ಯಾಂಡ್‌ನ ಗಡಿಯಲ್ಲಿ ಕುಖ್ಯಾತ ಮಾದಕವಸ್ತು ಕಳ್ಳಸಾಗಣೆ ವಲಯ ಗೋಲ್ಡನ್ ಟ್ರಯಾಂಗಲ್ ಎಂದು ಕರೆಯಲ್ಪಡುವ ಉತ್ತರ ಲಾವೋಸ್‌ನ ಬೊಕಿಯೊ ಪ್ರಾಂತ್ಯದಲ್ಲಿ ಲಾವೊ ಬ್ರಿವರಿ ಟ್ರಕ್‌ನ ಚಾಲಕನನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಈ ಮಾದಕ ವಸ್ತು ಸಾಗಾದಲ್ಲಿ ನನ್ನ ಪಾತ್ರವಿಲ್ಲ ಎಂದು ಲಾವೊ ಬ್ರಿವರಿ ಹೇಳಿದೆ.
‘ನಮ್ಮ ಬಿಯರ್ ಕ್ರೇಟ್‌ಗಳನ್ನು ಕಾನೂನುಬಾಹಿರ ಚಟುವಟಿಕೆಗಳಿಗಾಗಿ ದುರುಪಯೋಗಪಡಿಸಿಕೊಂಡಿರುವುದಕ್ಕೆ ನಾವು ತೀವ್ರ ಹತಾಶೆಗೊಂಡಿದ್ದೇವೆ’ಎಂದು ಬ್ರಿವರಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.