ಬೈರೂತ್ : ಇಸ್ರೇಲ್ ಪಡೆಗಳು ಭಾನುವಾರ ರಾತ್ರಿಯಿಡೀ ಲೆಬನಾನ್‌ನ ಹಣಕಾಸು ಸಂಸ್ಥೆ ‘ಅಲ್–ಖರ್ದ್–ಅಲ್ ಹಸನ್’ನ ಶಾಖೆಗಳನ್ನು ಗುರಿಯಾಗಿರಿಸಿಕೊಂಡು ವೈಮಾನಿಕ ದಾಳಿ ನಡೆಸಿದವು. ಹಿಜ್ಬುಲ್ಲಾ ಸಂಘಟನೆಯು ಹೆಚ್ಚು ನೆಲೆ ಹೊಂದಿರುವ ಬೈರೂತ್ ಮಾತ್ರವಲ್ಲದೆ ಲೆಬನಾನ್‌ನ ದಕ್ಷಿಣ ಭಾಗ, ಬೆಕಾ ಪಟ್ಟಣದ ಮೇಲೂ ದಾಳಿ ನಡೆಸಿದೆ.
‘ಸಾಮಾನ್ಯ ಜನರು ಉಳಿತಾಯ ಮಾಡಿದ ಹಣವನ್ನು ಹಿಜ್ಬುಲ್ಲಾ ಸಂಘಟನೆಯು ದಾಳಿಗೆ ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ’ ಎಂದು ಇಸ್ರೇಲ್ ಸೇನೆಯು ಸಮರ್ಥಿಸಿಕೊಂಡಿದೆ.
ದಾಳಿಯಿಂದ 9 ಮಹಡಿಯ ಕಟ್ಟಡದಲ್ಲಿ ವ್ಯಾಪಕ ಹೊಗೆ ಆವರಿಸಿಕೊಂಡಿತ್ತು. ಸಾಕಷ್ಟು ಪ್ರಮಾಣದಲ್ಲಿ ಕಟ್ಟಡ ತ್ಯಾಜ್ಯ ಸೇರ್ಪಡೆಯಾಗಿದ್ದರಿಂದ ಬುಲ್ಡೋಜರ್ ಮೂಲಕ ತೆರವುಗೊಳಿಸಲಾಯಿತು. ದಾಳಿ ಕುರಿತು ಇಸ್ರೇಲ್ ಸೇನೆಯು ಮುಂಚಿತವಾಗಿ ಎಚ್ಚರಿಕೆ ನೀಡಿದ್ದರಿಂದ ಸಾವು– ನೋವಿನ ಕುರಿತು ಯಾವುದೇ ವರದಿಯಾಗಿಲ್ಲ.
1982ರಲ್ಲಿ ಸ್ಥಾಪನೆಯಾದ ‘ಅಲ್–ಖರ್ದ್–ಅಲ್ ಹಸನ್’ ಹಣಕಾಸು ಸಂಸ್ಥೆಯು ಲೆಬನಾನ್‌ನಲ್ಲಿ ಇಸ್ಲಾಮಿಕ್ ಪದ್ಧತಿಯಂತೆ ಕಾರ್ಯಾಚರಣೆ ನಡೆಸುತ್ತದೆ. ಈ ಸಂಸ್ಥೆಯು ಹಿಜ್ಬುಲ್ಲಾ ಸೇರಿದಂತೆ ಹಲವು ಉಗ್ರಗಾಮಿ ಸಂಘಟನೆಗಳಿಗೂ ಹಣಕಾಸು ನೆರವು ಒದಗಿಸುತ್ತಿದೆ ಎಂದು ಇಸ್ರೇಲ್ ಆರೋಪಿಸಿ, ದಾಳಿ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.