ADVERTISEMENT

ಇಸ್ರೇಲ್‌ ದಾಳಿಗೆ 274 ಸಾವು: ಲೆಬನಾನ್ ಆರೋಗ್ಯ ಸಚಿವಾಲಯ

ಏಜೆನ್ಸೀಸ್
Published 23 ಸೆಪ್ಟೆಂಬರ್ 2024, 13:43 IST
Last Updated 23 ಸೆಪ್ಟೆಂಬರ್ 2024, 13:43 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೈರೂತ್ (ಲೆಬನಾನ್): ದಕ್ಷಿಣ ಲೆಬನಾನ್‌ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ 274 ಮಂದಿ ಮೃತಪಟ್ಟಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

‘ಭಾನುವಾರ ಮತ್ತು ಸೋಮವಾರ ನಡೆದ ದಾಳಿಯಲ್ಲಿ ಸಾವಿಗೀಡಾದವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ಮೃತರಲ್ಲಿ 21 ಮಕ್ಕಳು ಮತ್ತು 39 ಮಹಿಳೆಯರೂ ಸೇರಿದ್ದಾರೆ. ಇಸ್ರೇಲ್‌ ಸೇನೆಯ ದಾಳಿಗೆ ಕಳೆದ ಒಂದು ವಾರದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ’ ಎಂದು ಆರೋಗ್ಯ ಸಚಿವ ಫಿರಾಸ್ ಅಬಿಯದ್‌ ಹೇಳಿದ್ದಾರೆ.

ADVERTISEMENT

ಇಸ್ರೇಲ್‌–ಹಮಾಸ್‌ ಯುದ್ಧ ಆರಂಭವಾದ ಬಳಿಕ, ಇಸ್ರೇಲ್‌ ಸೇನೆ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ವೈಮಾನಿಕ ದಾಳಿ ನಡೆಸಿದ್ದು ಇದೇ ಮೊದಲು.

ಸೋಮವಾರದ ದಾಳಿಯೂ ಸೇರಿದಂತೆ ಹಿಜ್ಬುಲ್ಲಾ ಬಂಡುಕೋರರ 300ಕ್ಕೂ ಹೆಚ್ಚು ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಹೇಳಿದೆ. ‘ಶತ್ರುವಿನ ದಾಳಿಗೆ ಪ್ರತ್ಯುತ್ತರವಾಗಿ ಹೈಫಾದಲ್ಲಿರುವ ಸೇನಾ ನೆಲೆಗಳನ್ನು ಗುರಿಯಾಗಿಸಿ ರಾಕೆಟ್‌ ದಾಳಿ ನಡೆಸಿದ್ದೇವೆ’ ಎಂದು ಹಿಜ್ಬುಲ್ಲಾ ಪ್ರಕಟಣೆ ತಿಳಿಸಿದೆ.

‘ಹಿಜ್ಬುಲ್ಲಾ ಬಂಡುಕೋರರಿಗೆ ಸಂಬಂಧಿಸಿದ ಸ್ಥಳಗಳನ್ನು ಗುರಿಯಾಗಿಸಿ ಇನ್ನಷ್ಟು ನಿಖರ ದಾಳಿಗಳನ್ನು ನಡೆಸಲಿದ್ದೇವೆ. ಆದ್ದರಿಂದ ಆ ಪ್ರದೇಶಗಳಲ್ಲಿನ ಜನರು ತಕ್ಷಣದಲ್ಲೇ ತಮ್ಮ ಮನೆಗಳನ್ನು ತೊರೆಯಬೇಕು’ ಎಂದು ಇಸ್ರೇಲ್‌ ಸೇನೆಯ ವಕ್ತಾರ ಅಡ್ಮಿರಲ್ ಜನರಲ್ ಡೇನಿಯಲ್‌ ಹಗರಿ ಎಚ್ಚರಿಸಿದ್ದಾರೆ.

‘ದಕ್ಷಿಣ ಲೆಬನಾನ್‌ನ ಕೆಲವು ಪ್ರದೇಶಗಳಿಂದ ಸಾವಿರಾರು ಕುಟುಂಬಗಳು ಮನೆಗಳನ್ನು ತೊರೆದಿವೆ’ ಎಂದು ಅಬಿಯದ್‌ ಹೇಳಿದ್ದಾರೆ.

ಪೂರ್ವ ಲೆಬನಾನ್‌ನ ಬೆಕಾ ಕಣಿವೆ ಪ್ರದೇಶದ ಜನರಿಗೂ ಮನೆಗಳನ್ನು ತೊರೆಯುವಂತೆ ಇಸ್ರೇಲ್‌ ಸೇನೆ  ಸೂಚಿಸಿದ್ದು, ತನ್ನ ದಾಳಿಯನ್ನು ಲೆಬನಾನ್‌ನ ಇತರ ಭಾಗಗಳಿಗೆ ವಿಸ್ತರಿಸುವ ಎಚ್ಚರಿಕೆ ಕೊಟ್ಟಿದೆ. ಪೂರ್ವ ಲೆಬನಾನ್‌ನ ಬಾಲ್ಬೆಕ್‌ ನಗರದಲ್ಲಿ ಸೋಮವಾರ ಸ್ಫೋಟದ ಸದ್ದು ಕೇಳಿಬಂದಿರುವುದಾಗಿ ಮೂಲಗಳು ಹೇಳಿವೆ.

ಕಳೆದ ಮಂಗಳವಾರ ಮತ್ತು ಬುಧವಾರ ಲೆಬನಾನ್‌ನಾದ್ಯಂತ ನಡೆದ ಪೇಜರ್‌ ಸ್ಫೋಟದಲ್ಲಿ 39 ಮಂದಿ ಬಲಿಯಾಗಿ, 3 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.