ಜೆರುಸೆಲೇಂ/ಬೈರೂತ್ : ಇಸ್ರೇಲ್ ಹತ್ಯೆಗೈದಿರುವ ಹಿಜ್ಬುಲ್ಲಾ ಸಂಘಟನೆಯ ಮುಖ್ಯಸ್ಥ ಸಯ್ಯದ್ ಹಸನ್ ನಸ್ರಲ್ಲಾ ಅವರು ಲೆಬನಾನ್‌ನಲ್ಲಿ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿದ್ದರು. ಆದರೆ, ತನ್ನ ‘ಪರಮ ಶತ್ರು’ ಇಸ್ರೇಲ್‌ನ ಹತ್ಯೆ ಯತ್ನಗಳಿಂದ ಪಾರಾಗಲು ‘ಮರೆ’ಯಲ್ಲೇ ಜೀವನ ನಡೆಸಿದ್ದಾರೆ.
ಇಸ್ರೇಲ್ ಗಡಿಯ ಉತ್ತರಕ್ಕಿರುವ ಪುಟ್ಟ ದೇಶ ಲೆಬನಾನ್‌ನ ಬಹುಭಾಗವನ್ನು ನಿಯಂತ್ರಿಸುವ ಬಂಡುಕೋರ ಸಂಘಟನೆ ಹಿಜ್ಬುಲ್ಲಾ. 2023ರ ಅಕ್ಟೋಬರ್‌ನಲ್ಲಿ ಗಾಜಾಪಟ್ಟಿಯ ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಿತ್ತು, ನಂತರ ಇಸ್ರೇಲ್ ಗಾಜಾ ಪಟ್ಟಿ ಮೇಲೆ ಯುದ್ದ ಸಾರಿತ್ತು. ಈ ಯುದ್ಧ ಆರಂಭವಾದಾಗಿನಿಂದ ಹಿಜ್ಬುಲ್ಲಾ ಮತ್ತು ಇಸ್ರೇಲ್ ಪಡೆಗಳ ನಡುವೆ ಸಶಸ್ತ್ರ ಸಂಘರ್ಷ ನಡೆಯುತ್ತಲೇ ಇದೆ.
‘ಇಲ್ಲಿ ನಿಜಕ್ಕೂ ಸಂಘರ್ಷ ಇರುವುದು ಇಸ್ರೇಲ್ ಮತ್ತು ಇರಾನ್ ನಡುವೆ. ಹಿಜ್ಬುಲ್ಲಾ ಅದರ ಒಂದು ಭಾಗ ಮಾತ್ರ. ಪ್ಯಾಲೆಸ್ಟೀನ್ ಮುಸ್ಲಿಮರ ನೆಲೆಯನ್ನು ಯಹೂದಿಗಳು ಅಕ್ರಮಿಸಿಕೊಂಡು, ಇಸ್ರೇಲ್ ದೇಶವನ್ನು ನಿರ್ಮಿಸಿದ್ದಾರೆ ಎಂಬ ಪ್ರತಿಪಾದನೆಯೇ ಈ ಸಂಘರ್ಷಕ್ಕೆ ಕಾರಣ’ ಎಂಬುದು ಈಗ ಚಾಲ್ತಿಯಲ್ಲಿರುವ ವಿಶ್ಲೇಷಣೆ. ನಸ್ರಲ್ಲಾ ಅವರ ಜೀವನವನ್ನೂ ಈ ಸಂಘರ್ಷದ ಜತೆಗೇ ಗುರುತಿಸಬೇಕಾಗುತ್ತದೆ.
1982ರ ಸಂದರ್ಭದಲ್ಲಿ ಇಸ್ರೇಲ್ ವಿರುದ್ಧ ಲೆಬನಾನ್‌ನಲ್ಲಿ ಪ್ರತಿರೋಧವೊಂದು ರೂಪುತಳೆದಿತ್ತು. ಇಸ್ರೇಲ್‌ನ ಅತ್ಯಾಧುನಿಕ ಶಸ್ತ್ರಸಜ್ಜಿತ ಪಡೆಗಳ ವಿರುದ್ಧ ಸೆಣೆಸಲು ದಕ್ಷಿಣ ಲೆಬನಾನ್‌ನಲ್ಲಿ ಗೆರಿಲ್ಲಾ ಪಡೆ ಅಸ್ತಿತ್ವಕ್ಕೆ ಬಂದಿತ್ತು. ಈ ಪಡೆಯನ್ನೇ ಮುಂದೆ ಹಿಜ್ಬುಲ್ಲಾ ಎಂದು ಕರೆಯಲಾಯಿತು. ಈ ಬಂಡುಕೋರರಿಗೆ ಇರಾನ್ ನೆರವು ನೀಡುತ್ತಿತ್ತು ಎಂಬ ವಾದ ಇದೆ. ಇರಾನ್ ಸಹ ಇದನ್ನು ಅಲ್ಲಗೆಳೆಯುವುದಿಲ್ಲ.
ಲೆಬನಾನ್ ದಕ್ಷಿಣ ಭಾಗದ ಬೊಸುರಿಯೇ ಪ್ರದೇಶದ ಒಂದು ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ನಸ್ರಲ್ಲಾ, ಹಿಜ್ಬುಲ್ಲಾ ಜತೆಗೇ ಬೆಳೆದರು. ಗೆರಿಲ್ಲಾ ಹೋರಾಟಗಾರರೊಂದಿಗೆ ರಾತ್ರಿಗಳನ್ನು ಕಳೆಯುತ್ತಿದ್ದರು. ನಂತರದಲ್ಲಿ ಹಿಜ್ಬುಲ್ಲಾದ ಸಕ್ರಿಯ ಕಾರ್ಯಕರ್ತರಾದರು. ತಮ್ಮ ಭಾಷಣಗಳಿಗೆ ನಸ್ರಲ್ಲಾ ಹೆಸರುವಾಸಿ. ಸಂಘಟನೆಯಲ್ಲಿ ಹಂತ ಹಂತವಾಗಿ ಬೆಳೆದ ಇವರು, ತಮ್ಮ 35ನೇ ವಯಸ್ಸಿಗೆ (1992) ಹಿಜ್ಬುಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಲೆಬನಾನ್‌ನ ದಕ್ಷಿಣ ಭಾಗದ ಹಲವು ಪ್ರದೇಶಗಳು ಇಸ್ರೇಲ್ ವಶದಲ್ಲಿತ್ತು. 2006ರಲ್ಲಿ ಇಸ್ರೇಲ್ ವಿರುದ್ಧ ನಡೆಸಿದ ಸಶಸ್ತ್ರ ಹೋರಾಟದಲ್ಲಿ ಈ ಪ್ರದೇಶಗಳನ್ನು ಹಿಜ್ಬುಲ್ಲಾ ವಶಪಡಿಸಿಕೊಂಡಿತು. ಇದನ್ನು ನಸ್ರಲ್ಲಾ ಅವರು ‘ಪವಿತ್ರ ಗೆಲುವು’ ಎಂದಿದ್ದರು. ಈ ಬಳಿಕ ನಸ್ರಲ್ಲಾ ಅವರ ಹಿಡಿತ ಬಿಗಿಯಾಯಿತು. ಲೆಬನಾನ್ ಮಾತ್ರವಲ್ಲದೇ, ಮಧ್ಯಪ್ರಾಚ್ಯದಲ್ಲೂ ಪ್ರಭಾವಿ ನಾಯಕನಾಗಿ ಬೆಳೆದರು.
ಹೀಗಿದ್ದೂ, ಮಧ್ಯಪ್ರಾಚ್ಯದಲ್ಲಿ ಶಿಯಾ–ಸುನ್ನಿ ಸಂಘರ್ಷವನ್ನು ಹೆಚ್ಚಿಸಿದ ಆರೋಪ ನಸ್ರಲ್ಲಾ ಮೇಲಿದೆ. ಸಿರಿಯಾ–ಇರಾಕ್ ಆಂತರಿಕ ಕಲಹಗಳಲ್ಲಿ ನೇರವಾಗಿ ಭಾಗಿಯಾಗಿದ್ದು, ಶಿಯಾಗಳ ಪರವಾಗಿ ನಸ್ರಲ್ಲಾ ನಿಂತ ಕಾರಣದಿಂದಲೇ ಸುನ್ನಿ ಪ್ರಾಬಲ್ಯವಿರುವ ದೇಶಗಳು ಲೆಬನಾನ್‌ನಿಂದ ಅಂತರ ಕಾಯ್ದುಕೊಂಡವು ಎಂದು ಆರೋಪಿಸಲಾಗುತ್ತದೆ. ಅಲ್ಲದೆ, ಈ ಕಾರಣದಿಂದಲೇ 2019ರ ನಂತರ ಲೆಬನಾನ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಇದಕ್ಕೆಲ್ಲಾ ನಸ್ರಲ್ಲಾ ಅವರೇ ಕಾರಣ ಎಂದು ಆಪಾದಿಸಲಾಗುತ್ತದೆ.
ಈಗ ಹಮಾಸ್–ಇಸ್ರೇಲ್ ಯುದ್ಧದಲ್ಲಿ ನೇರವಾಗಿ ಭಾಗಿಯಾಗಿದ್ದ ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ನಡಸಿದ ಕರಾರುವಕ್ ದಾಳಿಯಲ್ಲಿ ನಸ್ರಲ್ಲಾ ಹತರಾಗಿದ್ದಾರೆ.
ಇದು ಇಲ್ಲಿಗೆ ಮುಗಿದಿಲ್ಲ. ನಮ್ಮ ಸಂದೇಶ ಸ್ಪಷ್ಟವಿದೆ. ಇಸ್ರೇಲ್ ಜನರನ್ನು ಯಾರು ಬೆದರಿಸುತ್ತಾರೊ ಅಂಥವರನ್ನು ಹೇಗೆ ಮಟ್ಟಹಾಕಬೇಕು ಎಂಬುದ ನಮಗೆ ತಿಳಿದಿದೆಹರ್ಜಿ ಹಲೇವಿ, ಇಸ್ರೇಲ್ ಸೇನೆಯ ಲೆಫ್ಟಿನೆಂಟ್ ಜನರಲ್
ಸುರಕ್ಷಿತ ಸ್ಥಳಕ್ಕೆ ಖಮೇನಿ
ನಸ್ರಲ್ಲಾ ಅವರ ಹತ್ಯೆಯನ್ನು ಇಸ್ರೇಲ್ ಘೋಷಿಸುತ್ತಿದ್ದಂತೆಯೇ ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹತ್ಯೆಯ ಕುರಿತು ಪ್ರತಿಕ್ರಿಯಿಸಿರುವ ಖಮೇನಿ ‘ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ಹತ್ಯಾಕಾಂಡವು ಜಿಯೊನಿಸ್ಟ್ ನಾಯಿಗಳ ಉಗ್ರತೆಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದೆ. ಲೆಬನಾನ್ ಜನರನ್ನು ಹಾಗೂ ನಮ್ಮ ಹೆಮ್ಮೆಯ ಹಿಜ್ಬುಲ್ಲಾವನ್ನು ಎಲ್ಲ ಮುಸ್ಲಿಮರು ತಮ್ಮ ಕೈಲಾದ ರೀತಿಯಲ್ಲಿ ಬೆಂಬಲಿಸಬೇಕು. ಈ ಪ್ರದೇಶದ (ಇಸ್ರೇಲ್) ಹಣೆಬರಹವನ್ನು ನಮ್ಮ ಪ್ರತಿರೋಧದ ಮೂಲಕ ನಿರ್ಧರಿಸುತ್ತೇವೆ. ಹಿಜ್ಬುಲ್ಲಾ ಸಂಘಟನೆಯು ಈ ಪ್ರತಿರೋಧದ ಮುಖ್ಯಭೂಮಿಕೆ ವಹಿಸಿಕೊಳ್ಳಲಿದೆ’ ಎಂದರು.
ಇಸ್ರೇಲಿಗರ ಸಂಭ್ರಮ ಮತ್ತು ಆತಂಕ
ಇಸ್ರೇಲ್–ಹಮಾಸ್ ಯುದ್ಧವು 2023ರ ಅ.7ರಂದು ಆರಂಭಗೊಂಡಿತು. ಮರುದಿನವೇ ಹಿಜ್ಬುಲ್ಲಾ ಸಂಘಟನೆಯು ಇಸ್ರೇಲ್ ಮೇಲೆ ದಾಳಿ ಆರಂಭಿಸಿತ್ತು. ಕಳೆದ ಒಂದು ವರ್ಷದಿಂದ ಹಿಜ್ಬುಲ್ಲಾ ಸಂಘನೆಯು ಇಸ್ರೇಲ್‌ನ ಉತ್ತರ ಭಾಗದ ಮೇಲೆ ದಾಳಿ ನಡೆಸುತ್ತಲೇ ಬಂದಿದೆ. ಇದರ ಪರಿಣಾಮವಾಗಿ ಇಸ್ರೇಲ್‌ನ 60 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಇದೇ ಕಾರಣಕ್ಕೆ ನಸ್ರಲ್ಲಾ ಅವರ ಹತ್ಯೆಯನ್ನು ಇಸ್ರೇಲಿಗರು ಸಂಭ್ರಮಿಸುತ್ತಿದ್ದಾರೆ. ಹಾಗೆಯೇ ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ.
‘ಈ ಹತ್ಯೆಯು ಯುದ್ಧವನ್ನು ಅಂತ್ಯಗೊಳಿಸದೆ ನಾವು ಇನ್ನಷ್ಟು ವರ್ಷಗಳವರೆಗೆ ಆತಂಕದಲ್ಲಿ ಇರುವಂತೆ ಮಾಡಲಿದೆಯೇ’ ಎನ್ನುವ ಅಭಿಪ್ರಾಯವನ್ನೂ ಇಸ್ರೇಲ್ ಜನರು ವ್ಯಕ್ತಪಡಿಸುತ್ತಿದ್ದಾರೆ.
ಹತ್ಯೆಗೊಳಗಾದ ಹಿಜ್ಬುಲ್ಲಾ ನಾಯಕರು
ಸೆ.28: ಹಸನ್ ನಸ್ರಲ್ಲಾ (ಸಂಘಟನೆಯ ಮುಖ್ಯಸ್ಥ)
ಸೆ.24: ಇಬ್ರಾಹಿಂ ಖುಬೈಸಿ (ರಾಕೆಟ್ ವಿಭಾಗದ ಮುಖ್ಯಸ್ಥ)
ಸೆ.20: ಇಬ್ರಾಹಿಂ ಅಕೀಲ್ (ರ್ಯಾಚರಣೆ ವಿಭಾಗದ ಕಮಾಂಡರ್)
ಜುಲೈ 30: ಫಾದ್ ಶುಕ್ರ್ (ಕಮಾಂಡರ್, ನಸ್ರಲ್ಲಾ ಅವರ ಆಪ್ತ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.