ADVERTISEMENT

ಪ್ರವಾದಿ ಮಹಮ್ಮದ್‌ಗೆ ಅವಮಾನ: ಹೇಳಿಕೆ ಖಂಡಿಸಿದ ದೇಶಗಳ ಸಂಖ್ಯೆ ಹೆಚ್ಚಳ

ಎಲ್ಲ ಧರ್ಮಗಳ ಬಗ್ಗೆ ಗೌರವ ಎಂಬ ನಿಲುವು ಪುನರುಚ್ಚರಿಸಿದ ಭಾರತ

ಪಿಟಿಐ
Published 7 ಜೂನ್ 2022, 19:31 IST
Last Updated 7 ಜೂನ್ 2022, 19:31 IST
ನೂಪುರ್‌ ಹೇಳಿಕೆಯ ವಿರುದ್ಧ ನಡೆದ ಪ್ರತಿಭಟನೆಯು ಹಿಂಸೆಗೆ ತಿರುಗಿದ್ದ ಕಾನ್ಪುರದಲ್ಲಿ ಮಂಗಳವಾರ ಅಂಗಡಿಗಳು ತೆರೆದವು. ನಗರದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು  –ಪಿಟಿಐ ಚಿತ್ರ
ನೂಪುರ್‌ ಹೇಳಿಕೆಯ ವಿರುದ್ಧ ನಡೆದ ಪ್ರತಿಭಟನೆಯು ಹಿಂಸೆಗೆ ತಿರುಗಿದ್ದ ಕಾನ್ಪುರದಲ್ಲಿ ಮಂಗಳವಾರ ಅಂಗಡಿಗಳು ತೆರೆದವು. ನಗರದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು  –ಪಿಟಿಐ ಚಿತ್ರ   

ದುಬೈ: ಬಿಜೆಪಿ ವಕ್ತಾರೆಯಾಗಿದ್ದ ನೂಪುರ್‌ ಶರ್ಮಾ ಮತ್ತು ದೆಹಲಿ ಬಿಜೆಪಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥ ನವೀನ್‌ ಕುಮಾರ್‌ ಜಿಂದಾಲ್‌ ಅವರು ಪ್ರವಾದಿ ಮಹಮ್ಮದ್‌ ಅವರನ್ನು ಅವಮಾನಿಸಿ ನೀಡಿದ್ದ ಹೇಳಿಕೆಗಳನ್ನು ಇರಾಕ್‌ ಮತ್ತು ಲಿಬಿಯಾ ಕೂಡ ಮಂಗಳವಾರ ಖಂಡಿಸಿವೆ. ವಿವಾದಾತ್ಮಕ ಹೇಳಿಕೆ ಮತ್ತು ಟ್ವೀಟ್‌ ಬಗ್ಗೆ ಇರಾಕ್‌ನ ಸಂಸದೀಯ ಸಮಿತಿಯು ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಇರಾಕ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಈ ಹೇಳಿಕೆಗೆ ಪ್ರತಿ‌ಕ್ರಿಯೆ ನೀಡಿದೆ. ಈ ಅಭಿಪ್ರಾಯಗಳು ಯಾವುದೇ ರೀತಿಯಲ್ಲಿಯೂ ಭಾರತ ಸರ್ಕಾರದ ನಿಲುವು ಅಲ್ಲ ಎಂದು ಭಾರತದ ರಾಯಭಾರ ಕಚೇರಿ ಹೇಳಿದೆ.

‘ಈ ನಿಂದನೆಗಳು, ದ್ವೇಷಪೂರಿತ ಮತ್ತು ಅವಮಾನಕರ ನಡವಳಿಕೆಗಳನ್ನು ತಡೆಯದೇ ಇದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಶಾಂತಿಯುತ ಸಹಬಾಳ್ವೆಯ ಮೇಲೆ ಊಹಾತೀತ ಪರಿಣಾಮಗಳಿಗೆ ಇದು ಕಾರಣವಾಗಬಹುದು, ಜನರ ನಡುವೆ ಸಂಘರ್ಷ ಮತ್ತು ಪ್ರಕ್ಷುಬ್ಧತೆಯನ್ನು ಹೆಚ್ಚಿಸಬಹುದು’ ಎಂದು ಇರಾಕ್‌ನ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ಐಎನ್‌ಎ ವರದಿ ಮಾಡಿದೆ.

ADVERTISEMENT

‘ನಮ್ಮ ನಾಗರಿಕ ಪರಂಪರೆ ಮತ್ತು ವೈವಿಧ್ಯದಲ್ಲಿ ಏಕತೆಯ ಸಾಂಸ್ಕೃತಿಕ ಪರಂಪರೆಗೆ ಅನುಗುಣವಾಗಿ ಭಾರತ ಸರ್ಕಾರವು ಎಲ್ಲ ಧರ್ಮಗಳಿಗೂ ಅತ್ಯಂತ ಹೆಚ್ಚಿನ ಗೌರವ ಕೊಡುತ್ತದೆ. ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ’ ಎಂದು ಭಾರತದ ರಾಯಭಾರ ಕಚೇರಿಯ ಹೇಳಿಕೆಯು ತಿಳಿಸಿದೆ.

‘ಭಾರತ–ಇರಾಕ್‌ ಸಂಬಂಧದ ವಿರುದ್ಧ ಇರುವ ಸ್ಥಾಪಿತ ಹಿತಾಸಕ್ತಿಗಳುಅವಹೇಳನಕಾರಿ ಹೇಳಿಕೆಯನ್ನು ಬಳಸಿಕೊಂಡು ಜನರನ್ನು ಎತ್ತಿಕಟ್ಟಲು ಯತ್ನಿಸುತ್ತಿವೆ. ನಮ್ಮ ದ್ವಿಪಕ್ಷೀಯ ಸಂಬಂಧಗಳ ಬಲವನ್ನು ಕುಗ್ಗಿಸಲು ಈ ಶಕ್ತಿಗಳು ಯತ್ನಿಸುತ್ತಿವೆ’ ಎಂದೂ ಭಾರತದ ರಾಯಭಾರ ಕಚೇರಿ ಹೇಳಿದೆ. ಕುವೈತ್ ಮತ್ತು ಕತಾರ್‌ನಲ್ಲಿರುವ ಭಾರತದ ರಾಯಭಾರ ಕಚೇರಿಗಳು ಕೂಡ ಭಾನುವಾರ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದವು.

ಲಿಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೂಡ ಅವಹೇಳನಕಾರಿ ಹೇಳಿಕೆಯನ್ನು ಬಲವಾಗಿ ಖಂಡಿಸಿದೆ. ಸಹಿಷ್ಣುತೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಮತ್ತು ಹಿಂಸೆ ಹಾಗೂ ದ್ವೇಷದ ಮಾತನ್ನು ತಿರಸ್ಕರಿಸಬೇಕು ಎಂದು ಲಿಬಿಯಾ ಹೇಳಿದೆ.

ಈಜಿಪ್ಟ್‌ ಕೇಂದ್ರ ಸ್ಥಾನವಾಗಿರುವ ಅರಬ್‌ ಸಂಸತ್ತು ಕೂಡ ಹೇಳಿಕೆಯನ್ನು ವಿರೋಧಿಸಿದೆ. ‘ಸಹಿಷ್ಣುತೆ, ಅಂತರ ಧರ್ಮೀಯ ಸಂವಾದದ ತತ್ವಗಳಿಗೆ ಈ ಹೇಳಿಕೆಗಳು ವಿರುದ್ಧವಾಗಿವೆ ಮತ್ತು ದ್ವೇಷಕ್ಕೆ ಕಾರಣವಾಗುತ್ತವೆ’ ಎಂದು ಅರಬ್‌ ಸಂಸತ್‌ ಹೇಳಿದೆ.

ಇಂಡೊನೇಷ್ಯಾ, ಸೌದಿ ಅರೇಬಿಯಾ, ಮಾಲ್ಡೀವ್ಸ್‌, ಅರಬ್‌ ಸಂಯುಕ್ತ ಸಂಸ್ಥಾನ, ಜೋರ್ಡನ್‌, ಬಹರೈನ್‌, ಒಮಾನ್‌ ಮತ್ತು ಅಫ್ಗಾನಿಸ್ತಾನ ಪ್ರವಾದಿ ವಿರುದ್ಧದ ಹೇಳಿಕೆಗಳನ್ನು ಸೋಮವಾರ ಖಂಡಿಸಿದ್ದವು. ಕತಾರ್‌, ಇರಾನ್‌ ಮತ್ತು ಕುವೈತ್‌ ಭಾನುವಾರವೇ ಖಂಡನಾ ಹೇಳಿಕೆ ನೀಡಿದ್ದವು.

ಭಾರತದ ರಾಯಭಾರಿಯನ್ನು ಕರೆಸಿಕೊಂಡಿರುವ ಇಂಡೊನೇಷ್ಯಾ ಮತ್ತು ಮಲೇಷ್ಯಾ, ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ.‘ಸ್ವೀಕಾರಾರ್ಹವಲ್ಲದ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಲಾಗುವುದು’ ಎಂದು ಇಂಡೊನೇಷ್ಯಾ ವಿದೇಶಾಂಗ ಸಚಿವಾಲಯವು ಟ್ವೀಟ್‌ ಮಾಡಿದೆ.

ಎಚ್ಚರದಿಂದ ಮಾತನಾಡಿ: ಪದಾಧಿಕಾರಿಗಳಿಗೆ ಬಿಜೆಪಿ ಸೂಚನೆ
ಧರ್ಮದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಾಗ ಅತೀವ ಎಚ್ಚರ ವಹಿಸಬೇಕು ಎಂದು ಮುಖಂಡರಿಗೆ ಬಿಜೆಪಿ ಸೂಚನೆ ಕೊಟ್ಟಿದೆ.

ಸುದ್ದಿವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ಗುರುತಿಸಲಾಗಿರುವ 30ಕ್ಕೂ ಹೆಚ್ಚು ಪದಾಧಿಕಾರಿಗಳು ಹಾಗೂ ಕೇಂದ್ರದ ಕೆಲವು ಸಚಿವರಿಗೆ ಮೌಖಿಕವಾಗಿ ಈ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಯಾವುದೇ ಧರ್ಮದ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಪದಾಧಿಕಾರಿಗಳು ಮಾತನಾಡುವುದನ್ನು ನಾವು ಬಯಸುವುದಿಲ್ಲ. ಪಕ್ಷದ ಸಿದ್ಧಾಂತಗಳನ್ನು ಸುಸಂಸ್ಕೃತವಾದ ರೀತಿಯಲ್ಲಿ ವಿವರಿಸಬೇಕು’ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

‘ಧಾರ್ಮಿಕವಾಗಿ ಸೂಕ್ಷ್ಮವಾದ ವಿಚಾರಗಳ ಬಗ್ಗೆ ಮಾತನಾಡುವುದಕ್ಕೆ ನಿಷೇಧ ಇಲ್ಲ. ಆದರೆ, ಯಾವುದೇ ಧರ್ಮದ ಮೂಲಭೂತ ಅಂಶಗಳಿಗೆ ಅವಮಾನ ಆಗದಂತೆ ನೋಡಿಕೊಳ್ಳಬೇಕು’ ಎಂದು ಬಿಜೆಪಿ ವಕ್ತಾರ ಗೋಪಾಲಕೃಷ್ಣ ಅಗರ್‌ವಾಲ್‌ ಹೇಳಿದ್ದಾರೆ.

ನೆದರ್‌ಲೆಂಡ್‌ ಸಂಸದನ ಬೆಂಬಲ
ನೆದರ್‌ಲೆಂಡ್‌ನ ಸಂಸದ ಗೀರ್ಟ್‌ ವೈಲ್ಡರ್ಸ್‌ ಅವರು ನೂಪುರ್‌ ಬೆಂಬಲಕ್ಕೆ ನಿಂತಿದ್ದಾರೆ. ‘ತುಷ್ಟೀಕರಣ ಯಾವತ್ತೂ ಕೆಲಸ ಮಾಡುವುದಿಲ್ಲ. ಇದು ಪರಿಸ್ಥಿತಿಯನ್ನು ಇನ್ನಷ್ಟು ಕೆಡಿಸುತ್ತದೆ. ಭಾರತದ ಗೆಳೆಯರೇ, ಮುಸ್ಲಿಂ ದೇಶಗಳ ಬೆದರಿಕೆಗೆ ಮಣಿಯಬೇಡಿ. ನಿಮ್ಮ ರಾಜಕಾರಣಿ ನೂಪುರ್ ಶರ್ಮಾ ಅವರನ್ನು ಬಲವಾಗಿ ಸಮರ್ಥಿಸಿಕೊಳ್ಳಿ ಮತ್ತು ಅವರ ಬಗ್ಗೆ ಹೆಮ್ಮೆಪಡಿ’ ಎಂದು ಅವರು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ನೂಪುರ್‌ಗೆ ನೋಟಿಸ್‌

* ಹೇಳಿಕೆ ದಾಖಲಿಸಲು ಇದೇ 22ರಂದು ಹಾಜರಾಗುವಂತೆ ನೂಪುರ್‌ ಶರ್ಮಾ ಅವರಿಗೆ ಮಹಾರಾಷ್ಟ್ರ ಪೊಲೀಸರು ನೋಟಿಸ್‌ ನೀಡಿದ್ದಾರೆ. ನೂಪುರ್ ವಿರುದ್ಧ ಠಾಣೆ ಜಿಲ್ಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

* ನೂಪುರ್ ಅವರಿಗೆ ದೆಹಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಅವರಿಗೆ ಬೆದರಿಕೆ ಕರೆಗಳು ಬಂದ ಕಾರಣ ಭದ್ರತೆ ನೀಡಲಾಗಿದೆ. ‘ನೂಪುರ್ ಮತ್ತು ಅವರ ಕುಟುಂಬಕ್ಕೆ ಕೂಡ ಭದ್ರತೆ ಒದಗಿಸಲಾಗಿದೆ.

* ತಮಗೆ, ತಮ್ಮ ಕುಟುಂಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆ ಬರುತ್ತಿದೆ ಎಂದು ನವೀನ್‌ ಕುಮಾರ್ ಜಿಂದಾಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.