ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್ ಪಕ್ಷದ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
'ಈ ಚುನಾವಣಾ ಫಲಿತಾಂಶವನ್ನು ನಾವು ಒಪ್ಪಿಕೊಳ್ಳಲೇಬೇಕು. ನಿಮ್ಮೆಲ್ಲರ ಬೆಂಬಲಕ್ಕೆ, ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಆಭಾರಿಯಾಗಿದ್ದೇನೆ' ಎಂದು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಚುನಾವಣೆ ಸೋಲಿನ ಬಳಿಕ ಹಾರ್ವರ್ಡ್ ವಿಶ್ವವಿದ್ಯಾಲಯದ ಆವರಣದಲ್ಲಿ ಭಾಷಣ ಮಾಡಿದ 60 ವರ್ಷದ ಹ್ಯಾರಿಸ್, 'ಇಂದು ಮುಂಜಾನೆ ನಾನು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಂಭಾಷಣೆ ನಡೆಸಿದ್ದು, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿಗಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದೇನೆ. ಅಧಿಕಾರ ವರ್ಗಾವಣೆ ಪ್ರಕ್ರಿಯೆ ಸುಗಮವಾಗಿಸಲು ನಾವು ಅವರಿಗೆ ಸಹಕರಿಸುತ್ತೇವೆ' ಎಂದು ತಿಳಿಸಿದ್ದಾರೆ.
'ನಾವು ಯಾವುದಕ್ಕಾಗಿ ಹೋರಾಡಿದ್ದೆವೋ, ಮತ ಚಲಾಯಿಸಿದ್ದೆವೋ ಆ ಫಲಿತಾಂಶ ನಮಗೆ ದೊರಕಿಲ್ಲ. ಆದರೆ ಅಮೆರಿಕದ ಭರವಸೆಯ ಬೆಳಕು ಯಾವತ್ತೂ ಪ್ರಕಾಶಮಾನವಾಗಿ ಬೆಳಗಲಿದೆ' ಎಂದು ಹೇಳಿದ್ದಾರೆ.
'ನಮ್ಮ ದೇಶದ ಸಂವಿಧಾನಕ್ಕೆ ನಾವು ಬದ್ಧರಾಗಿದ್ದೇವೆ. ಹಾಗಾಗಿ ಚುನಾವಣೆಯ ಫಲಿತಾಂಶವನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಚುನಾವಣೆ ಸಂದರ್ಭದಲ್ಲಿ ಕಿಚ್ಚು ಹೊತ್ತಿಸಿದ ಹೋರಾಟವನ್ನು ನಾವು ಅಂಗೀಕರಿಸುವುದಿಲ್ಲ. ಪ್ರಜಾಪ್ರಭುತ್ವ, ಕಾನೂನು ಮತ್ತು ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ' ಎಂದು ಹೇಳಿದ್ದಾರೆ.
'ದೇಶದ ಜನರ ಸ್ವಾತಂತ್ರ್ಯ, ನ್ಯಾಯ, ಅವಕಾಶ ಮತ್ತು ಘನತೆಗಾಗಿ ಹೋರಾಟ ಮುಂದುವರಿಯಲಿದೆ. ಈ ಹಿನ್ನಡೆಗಳ ನಡುವೆಯೂ ಆಶಾವಾದ, ನಂಬಿಕೆ, ಸತ್ಯ ಮತ್ತು ಬೆಳಕು ನಮ್ಮನ್ನು ಮುನ್ನಡೆಸಲಿದೆ' ಎಂದು ಹೇಳಿದ್ದಾರೆ.
'ನಾವು ಕರಾಳ ದಿನಗಳನ್ನು ಸಮೀಪಿಸುತ್ತಿದ್ದೇವೆ ಎಂಬ ಆತಂಕ ಜನರಲ್ಲಿದೆ. ಆದರೆ ಹಾಗಾಗುವುದಿಲ್ಲ ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.