ಜಕಾರ್ತ: ಇಂಡೊನೇಷ್ಯಾದ ರಾಜಧಾನಿ ಜಕಾರ್ತದ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ್ದ, ಲಯನ್ ಏರ್ ಕಂಪನಿಗೆ ಸೇರಿದ ವಿಮಾನ ಸೋಮವಾರ ಸಮುದ್ರದಲ್ಲಿ ಪತನಗೊಂಡಿದೆ. ಇದರಲ್ಲಿದ್ದ 189 ಪ್ರಯಾಣಿಕರು ಮತ್ತು ಏಳು ಸಿಬ್ಬಂದಿ ಮೃತಪಟ್ಟಿದ್ದಾರೆ.
ಸುಮಾತ್ರ ದ್ವೀಪಸಮೂಹದಲ್ಲಿರುವ ಪಂಗ್‌ಕಲ್ ಪಿನಾಂಗ್‌ಗೆ ಹೊರಟಿದ್ದ ಬೋಯಿಂಗ್ 737–800 ವಿಮಾನ ಬೆಳಿಗ್ಗೆ 6.20ಕ್ಕೆ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಜಕಾರ್ತದಿಂದ ಪಿನಾಂಗ್‌ಗೆ ಒಂದು ಗಂಟೆ 10 ನಿಮಿಷ ಹಾರಾಟದ ಅವಧಿ.
ಹಾರಾಟ ಆರಂಭಿಸಿದ 13 ನಿಮಿಷಗಳ ನಂತರ ರಾಡಾರ್ ಸಂಪರ್ಕದಿಂದ ಕಡಿತಗೊಂಡಿದ್ದ ವಿಮಾನ, ವೇಗವಾಗಿ ಮೇಲಕ್ಕೇರಿ ದಿಢೀರನೆ ಕೆಳಕ್ಕೆ ಕುಸಿಯಿತು.
ಪ್ರಯಾಣಿಕರಿಗೆ ಸೇರಿದ ಪುಡಿಯಾದ ಮೊಬೈಲ್‌ಗಳು, ಪುಸ್ತಕಗಳು, ಬ್ಯಾಗುಗಳು, ಪತನಗೊಂಡ ವಿಮಾನದ ಭಾಗಗಳ ಚಿತ್ರಗಳನ್ನು ಇಂಡೊನೇಷ್ಯಾದ ವಿಪತ್ತು ನಿರ್ವಹಣಾ ಏಜೆನ್ಸಿಯು ಆನ್‌ಲೈನ್‌ನಲ್ಲಿ ಪ್ರಕಟಿಸಿದೆ. ಇವುಗಳನ್ನು ರಕ್ಷಣಾ ತಂಡಗಳು ಮತ್ತು ಹಡಗುಗಳು ಪತನಗೊಂಡ ಸ್ಥಳದಿಂದ ಸಂಗ್ರಹಿಸಿವೆ.
ಪಶ್ವಿಮ ಜಾವಾ ಸಮುದ್ರದಲ್ಲಿ 30ರಿಂದ 40 ಮೀಟರ್ ಆಳಕ್ಕೆ ವಿಮಾನ ಮುಳುಗಿದೆ ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಏಜೆನ್ಸಿ ತಿಳಿಸಿದೆ.
ವಿಮಾನ ಎಲ್ಲಿ ನಿಖರವಾಗಿ ಪತಗೊಂಡಿದೆ ಎಂಬುದನ್ನು ಪತ್ತೆಹಚ್ಚಲು ಮುಳುಗು ತಜ್ಞರು ಯತ್ನಿಸುತ್ತಿದ್ದಾರೆ ಎಂದು ಏಜೆನ್ಸಿಯ ಮುಖ್ಯಸ್ಥ ಮೊಹಮ್ಮದ್ ಸೈಯುಗಿ ಹೇಳಿದ್ದಾರೆ.
‘ನನ್ನ ಅಂದಾಜಿನ ಪ್ರಕಾರ, ವಿಮಾನದಲ್ಲಿದ್ದ ಯಾರೂ ಬದುಕುಳಿದಿರುವ ಸಾಧ್ಯತೆ ಇಲ್ಲ. ಆದರೆ ಅವರ ದೇಹಕ್ಕೆ ಯಾವುದೇ ಘಾಸಿಯಾಗಿಲ್ಲ’ ಎಂದು ಶೋಧ ಮತ್ತು ರಕ್ಷಣಾ ಏಜೆನ್ಸಿಯ ಕಾರ್ಯಾಚರಣೆ ನಿರ್ದೇಶಕ ಬಾಂಬಾಂಗ್ ಸುರೊ ಅಜಿ ಅವರು ಹೇಳಿದ್ದಾರೆ.
ಪಂಗ್‌ಕಲ್ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಬಂಧಿಕರು ಆತಂಕದಿಂದ ಕಾಯುತ್ತಿದ್ದ ದೃಶ್ಯಗಳನ್ನು ಇಂಡೊನೇಷ್ಯಾದ ವಾಹಿನಿಗಳು ಪ್ರಸಾರ ಮಾಡಿವೆ.
2014ರ ಡಿಸೆಂಬರ್‌ನಲ್ಲಿ ಏರ್ ಏಷ್ಯಾ ವಿಮಾನ ಸಮುದ್ರದಲ್ಲಿ ಪತನಗೊಂಡು 162 ಮಂದಿ ಮೃತಪಟ್ಟಿದ್ದರು. ಇದಾದ ನಂತರ ಇಂಡೊನೇಷ್ಯಾದಲ್ಲಿ ನಡೆದ ಅತಿದೊಡ್ಡ ವಿಮಾನ ದುರಂತ ಇದಾಗಿದೆ.
2013ಲ್ಲಿ ಲಯನ್ ಏರ್‌ಲೈನ್ಸ್‌ಗೆ ಸೇರಿದ್ದ ವಿಮಾನ ರನ್‌ವೇಯಿಂದ ಜಾರಿ ಬಾಲಿ ದ್ವೀಪಕ್ಕೆ ಬಿದ್ದಿತ್ತು. ಈ ಅವಘಡದಲ್ಲಿ ಯಾವುದೇ ಸಾವುನೋವು ಆಗಿರಲಿಲ್ಲ. ಅದರಲ್ಲಿ 108 ಮಂದಿ ಇದ್ದರು.
ಕೆಲ ವರ್ಷಗಳ ಹಿಂದಷ್ಟೇ ಸ್ಥಾಪನೆಯಾಗಿರುವ ಲಯನ್ ಏರ್, ಇಂಡೊನೇಷ್ಯಾದ ಅತಿದೊಡ್ಡ ವಿಮಾನಯಾನ ಕಂಪನಿ ಆಗಿದೆ.
ದುರಸ್ತಿಗಾಗಿ ನಿಲ್ಲಿಸಲಾಗಿತ್ತು: ಆಗಸ್ಟ್‌ನಲ್ಲಷ್ಟೇ ಹಾರಾಟ ಆರಂಭಿಸಿದ್ದ ಈ ಪತನಗೊಂಡ ವಿಮಾನವನ್ನು ಮೊದಲು ಬಾಲಿಯಲ್ಲಿ ನಿಲ್ಲಿಸಿ ತಾಂತ್ರಿಕ ದೋಷವನ್ನು ದುರಸ್ತಿಪಡಿಸಲಾಗಿತ್ತು. ಆನಂತರ ಅದು ಜಕಾರ್ತಕ್ಕೆ ಹೊರಟಿತ್ತು ಎಂದು ಸಂಸ್ಥೆಯ ಸಿಇಒ ಎಡ್ವರ್ಡ್ ಸಿರೈಟ್ ಹೇಳಿದ್ದಾರೆ.
ನಿಖರ ಕಾರಣಕ್ಕೆ ತನಿಖೆ: ವಿಮಾನ ಪತನವಾಗಲು ನಿಖರ ಕಾರಣ ತಿಳಿಯಲು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್) ಮತ್ತು ವಿಮಾನ ದತ್ತಾಂಶವನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.