ಷಟೌಕ್ವಾ (ಅಮೆರಿಕ): ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ.
ಷಟೌಕ್ವಾ ಇನ್‌ಸ್ಟಿಟ್ಯೂಟ್‌ನ ವೇದಿಕೆಯ ಮೇಲೆ ಆಯೋಜಕರು ರಶ್ದಿ ಅವರನ್ನು ಭಾಷಣಕ್ಕೆ ಆಹ್ವಾನಿಸುತ್ತಿದ್ದಂತೆಯೇ ಅಪರಿಚಿತ ವ್ಯಕ್ತಿ ರಶ್ದಿ ಅವರಿಗೆ ಚಾಕುವಿನಿಂದ ಇರಿದನು. ತಕ್ಷಣವೇ ರಶ್ದಿ ನೆಲಕ್ಕೆ ಕುಸಿದುಬಿದ್ದರು. ಹಲ್ಲೆಕೋರನನ್ನು ಬಂಧಿಸಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಶ್ದಿ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇರಿಸಲಾಗಿದೆ. ಅವರು ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಮತ್ತು ಅವರ ಯಕೃತ್ತು ಸಹ ಹಲ್ಲೆಯಿಂದ ಹಾನಿಗೊಳಗಾಗಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಕಳವಳ ವ್ಯಕ್ತಪಡಿಸಿದ ಗಣ್ಯರು...
ಸಲ್ಮಾನ್ ರಶ್ದಿ ಮೇಲಿನ ದಾಳಿಯ ಬಗ್ಗೆ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ದಾಳಿಕೋರನನ್ನು ‘ಜಿಹಾದಿ’ ಎಂದು ಕರೆದಿರುವ ಬಾಲಿವುಡ್ ನಟಿ ಕಂಗನಾ ರನೌತ್, ‘ಇದೊಂದು ಜಿಹಾದಿಗಳಿಂದ ನಡೆದ ಭಯಾನಕ ಕೃತ್ಯವಾಗಿದೆ. ಈ ಘಟನೆ ನನ್ನನ್ನು ಪದಗಳಲ್ಲಿ ಹೇಳಲಾಗದಷ್ಟು ಬೆಚ್ಚಿಬೀಳಿಸಿದೆ. ನಾನು ದಿಗ್ಭ್ರಮೆಗೊಂಡಿದ್ದೇನೆ’ ಎಂದು ಹೇಳಿದ್ದಾರೆ.
‘ಸಲ್ಮಾನ್ ರಶ್ದಿ ಅವರ ಮೇಲೆ ನ್ಯೂಯಾರ್ಕ್‌ನಲ್ಲಿ ದಾಳಿ ನಡೆದಿದೆ ಎಂಬ ಸಂಗತಿ ತಿಳಿದು ನನಗೆ ಆಘಾತವಾಗಿದೆ. ಇದು ಸಂಭವಿಸುತ್ತದೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಅವರು ಪಶ್ಚಿಮ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದರು. 1989ರಿಂದ ಅವರಿಗೆ ರಕ್ಷಣೆ ನೀಡಲಾಗಿತ್ತು. ಅವರ ಮೇಲೆ ನಡೆದಿರುವ ದಾಳಿಯ ಅರ್ಥ ಇಸ್ಲಾಂ ಧರ್ಮವನ್ನು ಟೀಕಿಸುವವರ ಮೇಲಿನ ದಾಳಿ ಎಂದರ್ಥ. ಈ ಬಗ್ಗೆ ನಾನು ಚಿಂತಿತಳಾಗಿದ್ದೇನೆ’ ಎಂದು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಟ್ವೀಟ್ ಮಾಡಿದ್ದಾರೆ.
‘ಸಲ್ಮಾನ್ ರಶ್ದಿಯವರ ಮೇಲೆ ಕೆಲವು ಮತಾಂಧರು ನಡೆಸಿದ ದಾಳಿಯನ್ನು ನಾನು ಖಂಡಿಸುತ್ತೇನೆ. ನ್ಯೂಯಾರ್ಕ್ ಪೊಲೀಸರು ಮತ್ತು ನ್ಯಾಯಾಲಯವು ದಾಳಿಕೋರನ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಸಾಹಿತಿ ಜಾವೇದ್ ಅಖ್ತರ್ ಟ್ವೀಟ್ ಮಾಡಿದ್ದಾರೆ.
‘ಚಾಕು ಇರಿತದಿಂದ ಸಂಪೂರ್ಣವಾಗಿ ಗಾಯಗೊಂಡಿರುವ ಸಲ್ಮಾನ್ ರಶ್ದಿ ಅವರು ಶೀಘ್ರ, ಸಂಪೂರ್ಣ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅವರ ಮುಂದಿನ ಜೀವನ ಮೊದಲಿನಂತೆ ಇರುವುದಿಲ್ಲ. ಸೃಜನಾತ್ಮಕ ಅಭಿವ್ಯಕ್ತಿಯು ಇನ್ನು ಮುಂದೆ ಮುಕ್ತವಾಗಿರುವುದಿಲ್ಲ ಎಂಬುದನ್ನು ಹರಗಿಸಿಕೊಳ್ಳುವುದು ದುಃಖಕರ ಸಂಗತಿ’ ಎಂದು ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಸಲ್ಮಾನ್ ರಶ್ದಿ ಅವರ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡೋಣ. ರಶ್ದಿ ಅವರ ಮೇಲಿನ ದಾಳಿ ಖಂಡನೀಯ ಎಂದು ನಟಿ ಸ್ವರಾ ಭಾಸ್ಕರ್ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.